ಮೈಸೂರು,ಡಿಸೆಂಬರ್,31,2024 (www.justkannada.in): ಕೆಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡಬೇಕೆಂಬ ವಿಚಾರ ಮುನ್ನೆಲೆಗೆ ಬಂದ ಬೆನ್ನಲ್ಲೆ ಆ ರಸ್ತೆಗೆ ಪ್ರಿನ್ಸೆಸ್ ಎಂಬ ಹೆಸರಿದೆ ಎಂದು ವರದಿಯಾಗಿತ್ತು. ಇದೀಗ ಈ ಬಗ್ಗೆ ಕಡತಗಳ ಪರಿಶೀಲನೆ ನಡೆಸಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್ ಅವರು, 1999 ರಿಂದ 2024 ವರೆಗಿನ ಎಲ್ಲಾ ಕಡತ ಪರಿಶೀಲನೆ ನಡೆಸಲಾಗಿದೆ. ಎಲ್ಲಿಯೂ ಕೂಡ ಪ್ರಿನ್ಸಸ್ ಹೆಸರು ಇಲ್ಲ. ಆ ರಸ್ತೆಗೆ ಯಾವ ಹೆಸರು ಇಲ್ಲ. ಈಗ 1964 ರಿಂದ 1999ರವರೆಗಿನ ಕಡತಗಳನ್ನ ಪರಿಶೀಲನೆ ಮಾಡುತ್ತಿದ್ದೇವೆ. ಅದು ಕೂಡ ಬಹುತೇಕ ಮುಕ್ತಾಯವಾಗಿದೆ. ಇನ್ನೂ 20 ವರ್ಷಗಳ ಕಡತಗಳ ಪರಿಶೀಲನೆ ಮಾತ್ರ ಬಾಕಿ ಇದೆ ಎಂದರು.
ಈಗ ಪರಿಶೀಲನೆ ಮಾಡಿರುವ ಕಡತಗಳಲ್ಲಿ ಎಲ್ಲಿಯೂ ಕೂಡ ಪ್ರೀನ್ಸಸ್ ಹೆಸರು ಪ್ರಸ್ತಾಪ ಆಗಿಲ್ಲ. ಕೆ.ಆರ್ ರಸ್ತೆಗೆ ಅಧಿಕೃತವಾಗಿ ಯಾವ ಹೆಸರು ಇಲ್ಲ. ನಾವು ಮೈಸೂರು ಪಾಲಿಕೆಯ 9 ವಲಯಗಳ ಆಯುಕ್ತರಿಂದ ಮಾಹಿತಿ ಪಡೆದಿದ್ದೇನೆ. ಅವರು ಕೂಡ ಪ್ರಿನ್ಸಸ್ ಹೆಸರು ಇದೆ ಎಂಬುದಕ್ಕೆ ಯಾವ ಅಧಿಕೃತ ದಾಖಲೆ ಇಲ್ಲ ಎಂದು ಹೇಳಿದ್ದಾರೆ.
ನಮ್ಮ ವ್ಯಾಪ್ತಿಯ ದಾಖಲೆ ಪರಿಶೀಲನೆ ಬಹುತೇಕ ಮುಕ್ತಾಯವಾಗಿದೆ. ಗೆಜೆಟಿಯರಿನಲ್ಲಿ ಆ ಹೆಸರು ಇದಿಯೋ ಇಲ್ಲವೋ ಎಂಬುದು ನನಗೆ ಮಾಹಿತಿ ಇಲ್ಲ. ಆ ದಾಖಲೆ ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ. ಪಾಲಿಕೆಯ ಕೌನ್ಸಿಲ್ ವ್ಯಾಪ್ತಿಯಲ್ಲಿ ಪ್ರಿನ್ಸಸ್ ಹೆಸರಂತೂ ಇಲ್ಲ ಎಂದು ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಫ್ ಸ್ಪಷ್ಟನೆ ನೀಡಿದರು.
Key words: KRS Road, name, Princess, clarification