ಮೈಸೂರು,ಫೆಬ್ರವರಿ,29,2024(www.justkannada.in): ಮಾರ್ಚ್ 3 ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ 19ನೇ ವಾರ್ಷಿಕ ಘಟಿಕೋತ್ಸವ ನಡೆಯಲಿದ್ದು ಈ ಬಾರಿ ಡಾ ಹೆಚ್. ಸಿ ಸತ್ಯನ್, ಕೆ.ಎಂ ವಿರೇಶ್ ಮತ್ತು ಮೀರಾ ಶಿವಲಿಂಗಯ್ಯ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕೆಎಸ್ ಒಯು ಕುಲಪತಿ ಪ್ರೊ. ವಿ. ಶರಣಪ್ಪ ಹಲಸೆ ತಿಳಿಸಿದರು.
ಕೆಎಸ್ಒಯು ನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಲಪತಿ ಪ್ರೊ. ವಿ. ಶರಣಪ್ಪ ಹಲಸೆ, ಈ ಬಾರಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಿಂದ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಕರಾಮುವಿ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಉಪಸ್ಥಿತಿಯಲ್ಲಿ ತಾವು ಅಧ್ಯಕ್ಷತೆ ವಹಿಸುವುದಾಗಿ ವಿವರಿಸಿದರು.
ಘಟಿಕೋತ್ಸವದಲ್ಲಿ ಮೂವರು ಪಿಹೆಚ್ ಡಿ ಸ್ವೀಕರಿಸಲಿದ್ದಾರೆ. 30 ಚಿನ್ನದ ಪದಕ ಮತ್ತು 37 ನಗದು ಬಹುಮಾನ ವಿದ್ಯಾರ್ಥಿಗಳು ಪಡೆಯಲಿದ್ದಾರೆ. 3398 ಪುರುಷರು ಮತ್ತು 4471 ಮಹಿಳಾ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 7869 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ಕುಲಪತಿ ಪ್ರೊ. ವಿ. ಶರಣಪ್ಪ ಹಲಸೆ ತಿಳಿಸಿದರು.
ಸಾವಾಜಿಕ ಸೇವೆಯಲ್ಲಿ ತೊಡಗಿರುವ ಚಿತ್ರದುರ್ಗದ ಕೆ.ಎಂ. ವೀರೇಶ್, ಶೈಕ್ಷಣಿಕ ವಲಯದಿಂದ ಮಂಡ್ಯದ ಮೀರಾ ಶಿವಲಿಂಗಯ್ಯ ಮತ್ತು ಕರ್ನಾಟಕದ ಮಾಹಿತಿ ಆಯೋಗದ ನೂತನ ಆಯುಕ್ತ ಎಚ್.ಸಿ. ಸತ್ಯನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
ಚಿತ್ರದುರ್ಗದ ಜಯಚಾಮರಾಜೇಂದ್ರ ಬಡಾವಣೆ ನಿವಾಸಿಯಾದ ಕೆ.ಎಂ. ವೀರೇಶ್ ಅವರು ಬಿ.ಕಾಂ, ಎಲ್ ಎಲ್ ಬಿ ಪದವೀಧರರು. ಮುರುಘರಾಜೇಂದ್ರ ವಿದ್ಯಾಪೀಠದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೆ ಮೂರು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಭದ್ರ ಮೇಲ್ದಂಡೆ ಯೋಜನೆ ಹೋರಾಟ ಸೇರಿ ಹಲವು ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯಲ್ಲಿ ನಿರತರಾಗಿದ್ದಾರೆ.
Key words: KSOU-Annual Convocation – Mar. 3-Honorary doctorates – three achievers