ಮೈಸೂರು,ಡಿಸೆಂಬರ್,24,2024 (www.justkannada.in): ಪ್ರತಿಯೊಬ್ಬ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಕಾಂಕ್ಷಿಗೂ ಇಚ್ಛಾಶಕ್ತಿ, ಕ್ರಿಯಾ ಶಕ್ತಿ, ಜ್ಞಾನಶಕ್ತಿ ಹಾಗೂ ತನ್ನ ಗುರಿಯೆಡೆಗೆ ಸ್ಪಷ್ಟತೆ ಇರಬೇಕು. ಮತ್ತು ವ್ಯಕ್ತಿತ್ವ ವಿಕಸನ ವೃದ್ಧಿಸಲು ಸಾಮಾನ್ಯ ಜ್ಞಾನ ತುಂಬಾ ಇರಬೇಕು ಎಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜಿ. ರೂಪ ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ನಡೆದ ಕೆಎಎಸ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ‘ಮುಕ್ತಭಂಡಾರ’ (ಸಾಫ್ಟ್ ಕಾಪಿ) ಅಧ್ಯಯನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
“ಇಂದು ಜಗತ್ತು ನಾಗಾಲೋಟದಲ್ಲಿ ಓಡುತ್ತಿದೆ. ಎಲ್ಲಾ ರಂಗಗಳಲ್ಲೂ ಸ್ಪರ್ಧೆ ಹೆಚ್ಚಾಗಿದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಕೆರಿಯರ್ ಬಗ್ಗೆ ಹೆಚ್ಚು ಗಮನಹರಿಸಬೇಕು. ನಿಮ್ಮ ಗುರಿಯೆಡೆಗೆ ಸ್ಪಷ್ಟತೆ ಇರಬೇಕು. ತರಬೇತಿಗಳು ವ್ಯಕ್ತಿತ್ವ ವಿಕಸನವನ್ನು ವೃದ್ಧಿಗೊಳಿಸುತ್ತವೆ. ಅವಕಾಶಗಳನ್ನು ಬೆನ್ನತ್ತಿ ಹೋಗಬೇಕು. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯುತ್ತಿರುವುದು ಖುಷಿಯ ವಿಚಾರ,” ಎಂದು ತಿಳಿಸಿದರು.
ಮನುಷ್ಯ ಮೌಲ್ಯಗಳನ್ನು ಮರೆಯಬಾರದು. ನಾನು ಕೆಎಎಸ್ ಪರೀಕ್ಷೆ ಬರೆಯುವ ಸಮಯಕ್ಕೂ ಇಂದಿಗೂ ಬಹಳಷ್ಟು ವ್ಯತ್ಯಾಸ ಇದೆ. ಇಂದು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಕಾಂಕ್ಷಿಗಳಿಗೆ ಅಧ್ಯಯನ ನಡೆಸಲು ಸಾಕಷ್ಟು ಪಠ್ಯಪುಸ್ತಕ ಹಾಗೂ ಮಾರ್ಗದರ್ಶನಗಳು ಸಿಗುತ್ತಿದೆ. ಕಾಲೇಜಿನಲ್ಲಿ ಕಲಿತದ್ದು ಕೆಎಎಸ್ ನಲ್ಲಿ ಬಳಕೆ ಆಗುವುದಿಲ್ಲ ಎಂಬುದು ನೆನಪಿರಲಿ. ನಿಮ್ಮ ಜ್ಞಾನವನ್ನು ಒರೆ ಹಚ್ಚಬೇಕು,” ಎಂದು ಕಿವಿಮಾತು ಹೇಳಿದರು.
‘ಇಂದು ಕಲಿಕಾ ಬೋಧನಾದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಗ್ರಂಥಾಲಯದಲ್ಲಿ ಹೆಚ್ಚು ಪುಸ್ತಕಗಳು ಸಿಗುತ್ತಿವೆ. ಅಲ್ಲಿ ಹೆಚ್ಚು ಸಮಯ ಕಳೆಯಿರಿ. ಯಾವುದನ್ನು ಎಷ್ಟು ಓದಬೇಕೆಂಬ ಯೋಜನಾ ಪಟ್ಟಿ ತಯಾರಿಸಿಕೊಳ್ಳಿರಿ. ಕೆಎಎಸ್ ನಲ್ಲಿ ಕೆಲವರಿಗೆ ಯಶಸ್ಸು ಸಿಗುತ್ತದೆ ಮತ್ತೆ ಕೆಲವರಿಗೆ ಸಿಗುವುದಿಲ್ಲ. ಆದರೆ ನಿರಂತರ ಪ್ರಯತ್ನದಿಂದ ಯಾವುದಾದರೂ ಒಂದು ಸರ್ಕಾರಿ ಹುದ್ದೆಯನ್ನು ಪಡೆದೇ ಪಡೆಯಬಹುದು ಎಂದರು.
ಕರಾಮುವಿ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಅಧ್ಯಕ್ಷತೆ ವಹಿಸಿ ಮಾತನಾಡಿ ದೊಡ್ಡ ಗುರಿ ಹೊಂದಿರಬೇಕು. ತಾವು ಯಾವುದನ್ನು ಸಾಧಿಸಬೇಕು ಎಂಬುದನ್ನು ಮನನ ಮಾಡಿಕೊಂಡು ಅದರಂತೆ ತಯಾರಿ ನಡೆಸಬೇಕು ಎಂದು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.
ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಶೈಕ್ಷಣಿಕ ಡೀನ್ ಪ್ರೊ.ಎನ್. ಲಕ್ಷ್ಮಿ, ಅಧ್ಯಯನ ಡೀನ್ ಪ್ರೊ.ಎಂ.ರಾಮನಾಥಂ ನಾಯ್ಡು, ಹಣಕಾಸು ಅಧಿಕಾರಿ ಪ್ರೊ. ಎಸ್. ನಿರಂಜನ್ ರಾಜ್ ಇವರುಗಳು ಅಭ್ಯರ್ಥಿಗಳಿಗೆ ಶುಭಹಾರೈಕೆಯ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಕೆ.ಜಿ. ಕೊಪ್ಪಲ್ ಗಣೇಶ್, ಸೇರಿದಂತೆ ಇತರರು ಇದ್ದರು.
Key words: KSOU, Competitive exam, aspirants, M.G. Roopa