ಮೈಸೂರು, ಅ.22, 2021 : (www.justkannada.in news ) ಕರ್ನಾಟಕ ರಾಜ್ಯ ಮುಕ್ತ ವಿವಿ ಸಾಧನೆಗಳ ಮೂಲಕ ಹೆಸರು ಮಾಡುತ್ತಿಲ್ಲ. ಕೇವಲ ಅಕ್ರಮಗಳ ಮೂಲಕವೇ ಸುದ್ದಿಯಾಗುತ್ತಿದೆ. ಮುಕ್ತ ವಿ ವಿ ಭ್ರಷ್ಟಾಚಾರದ ಕೂಪವಾಗಿ ಪರಿಣಮಿಸಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ಸುದ್ದಿಗೋಷ್ಠಿ ನಡೆಸಿ ಹೇಳಿದಿಷ್ಟು..
ಸಂಪನ್ಮೂಲ ಕ್ರೋಢೀಕರಣಕ್ಕಾಗಿ ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕವನ್ನು ಶೇಕಡ 35% ರಿಂದ 50% ರಷ್ಟು ಹೆಚ್ಚಳ ಮಾಡಲಾಗಿದೆ. ಇದು ವಿದ್ಯಾರ್ಥಿಗಳಿಗೆ ಹೊರೆಯಾಗಿ ಪರಿಣಮಿಸಿದೆ.
ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಿ ಅದರಿಂದ ಸಂದಾಯವಾಗುವ ಹಣದಿಂದ ಐಷಾರಾಮಿ ಕಾರುಗಳ ಖರೀದಿಗೆ ಮುಂದಾಗಿದ್ದಾರೆ. ಮೂರು ಐಷಾರಾಮಿ ಕಾರುಗಳ ಖರೀದಿಗೆ ಮುಂದಾಗಿದ್ದಾರೆ. ಈ ಮೂಲಕ ದುಂದು ವೆಚ್ಚ ಮಾಡಲು ಹೊರಟಿದ್ದಾರೆ. ಮುಂದಿನ ಸೋಮವಾರದೊಳಗೆ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಹಿಂಪಡೆಯಬೇಕು. ಇಲ್ಲದಿದ್ದರೆ ಅನಿರ್ಧಿಷ್ಟಾವಧಿ ಧರಣಿ ಪ್ರತಿಭಟನೆ ಆರಂಭಿಸುತ್ತೇವೆ.
ಮುಕ್ತ ವಿವಿ ಅಕ್ರಮದ ಬಗ್ಗೆ ಈಗಾಗಲೇ ಹಲವಾರು ಬಾರಿ ದೂರು ನೀಡಿದ್ದೇನೆ. ನಾನು ನೀಡಿದ ದೂರಿಗೆ ರಾಜ್ಯಪಾಲರಿಂದ, ಯುಜಿಸಿಯಿಂದ ಸ್ಪಂದನೆ ಸಿಕ್ಕಿದೆ. ಆದರೆ ರಾಜ್ಯ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಬಹುಶಃ, ಮುಕ್ತ ವಿವಿ ಅಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಶಾಮೀಲಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.
key words : ksou-fee-hike-reduce-protest-warn-shivaramu