ಮೈಸೂರು, ನ.12,2022 : (www.justkannada.in news) : ಕರ್ನಾಟಕ ರಾಜ್ಯ ಮುಕ್ತ ವಿವಿ ಹಣಕಾಸು ಅಧಿಕಾರಿ ಖಾದರ್ ಪಾಷ ಅವರನ್ನು ಆರ್ಥಿಕ ಇಲಾಖೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದು ಗೊಂದಲಕ್ಕೆ ಎಡೆಮಾಡಿದೆ.
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಸ್ತುತ ನಿಯೋಜನೆ ಮೇಲೆ ಕೆಎಸ್ಒಯು ಹಣಕಾಸು ಅಧಿಕಾರಿಯಾಗಿರುವ ಖಾದರ್ ಪಾಷ ಅವರನ್ನು ಆಡಾಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಆಡಿಷನಲ್ ಡೈರಕ್ಟರ್ , ಪ್ರಾದೇಶಿಕ ಕಚೇರಿ , ಮೈಸೂರು. ಇಲ್ಲಿಗೆ ಸ್ವಂತ ವೇತನ ಶ್ರೇಣಿ ಮೇಲೆ ವರ್ಗಾಯಿಸಿ ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿ ನೇತ್ರಪ್ರಭಾ ಎಂ.ಧಾಯಪುಲೆ, ನ.10 ರಂದು ಆದೇಶ ಹೊರಡಿಸಿದ್ದಾರೆ.
ವಿಪರ್ಯಾಸವೆಂದರೆ, ಈ ಹುದ್ದೆಯಲ್ಲಿ ಈಗಾಗಲೇ ಹಾಲಿ ಸಿದ್ದರಾಜು ಎಂಬುವವರು ಕರ್ತವ್ಯ ನಿರ್ವಹಿಸುತ್ತಿದ್ದು, ಹುದ್ದೆ ಖಾಲಿ ಇಲ್ಲ. ಜತೆಗೆ ಸಿದ್ದರಾಜು ಅವರನ್ನು ವರ್ಗಾಯಿಸಿರುವ ಬಗೆಗೂ ಆದೇಶದಲ್ಲಿ ಸ್ಪಷ್ಟ ಮಾಹಿತಿ ಇಲ್ಲ. ಇದು ಗೊಂದಲಕ್ಕೆ ಎಡೆಮಾಡಿದೆ.
ಪ್ರಮುಖವಾಗಿ, ಈ ಹಿಂದೆ (ಖಾದರ್ ಪಾಷ ಅವರ ಅವಧಿ ಸೇರಿದಂತೆ ) ಕರ್ನಾಟಕ ರಾಜ್ಯ ಮುಕ್ತವಿವಿಯಲ್ಲಿ ಕೇಳಿ ಬಂದಿದ್ದ ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಖರ್ಚು, ವೆಚ್ಚದ ಬಗ್ಗೆ ಆಡಿಟ್ ನಡೆಸಲು ಸಿದ್ದರಾಜು ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಅದೇ ಹುದ್ದೆಗೆ ಆರೋಪ ಕೇಳಿ ಬಂದಿದ್ದ ಖಾದರ್ ಪಾಷ ಅವರನ್ನೇ ನೇಮಿಸಿ ಸರಕಾರ ಆದೇಶ ಹೊರಡಿಸಿರುವುದು (ಅದು ಖಾಲಿ ಇಲ್ಲದ ಹುದ್ದೆಗೆ) ಆಶ್ಚರ್ಯಕ್ಕೆ ಎಡೆಮಾಡಿದೆ.
ತೀವ್ರ ಆಕ್ಷೇಪ :
ಕೆಸಿಎಸ್ಆರ್ ನಿಯಮಾವಳಿಗಳ ಪ್ರಕಾರ ಆರೋಪಿತ ವ್ಯಕ್ತಿಯನ್ನ ಅದೇ ಹುದ್ದೆಗೆ ನೇಮಕ ಮಾಡುವಂತಿಲ್ಲ ಎಂದು ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಅಭಿಪ್ರಾಯಪಟ್ಟರು.
ಜಸ್ಟ್ ಕನ್ನಡ ಜತೆ ಮಾತನಾಡಿದ ಅವರು, ಪೂರ್ವಾಗ್ರಹ ಪೀಡಿತರಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂಬ ಸಲುವಾಗಿ ಈ ಆದೇಶ ಮಾಡಲಾಗಿದೆ. ಆದರೆ ವಿಪರ್ಯಾಸವೆಂದರೆ, ಕರ್ನಾಟಕ ರಾಜ್ಯ ಮುಕ್ತ ವಿವಿಯ ಹಣಕಾಸು ಅಧಿಕಾರಿಯನ್ನು ಖಾಲಿ ಇಲ್ಲದ ಹುದ್ದೆಗೆ ವರ್ಗಾಯಿಸಿ ಆದೇಶ ಹೊರಡಿಸಿರುವುದು ನೋಡಿದರೆ ಕಳಂಕಿತನ ಕೈಗೆ ಬೀಗ ಕೊಟ್ಟಂತಾಗುತ್ತದೆ. ಖಾದರ್ ಪಾಷ ವಿರುದ್ಧ ಈಗಾಗಲೇ ನಾನು ಕ್ರಿಮಿನಲ್ ಮೊಕದ್ದಮೆ ಹೂಡಿರುವೆ ಎಂದು ಪ್ರೊ.ರಂಗಪ್ಪ ತಿಳಿಸಿದರು.
key words : KSOU-finance-officer-Khadarpasha-transfers-mysore