ಮೈಸೂರು,ಸೆಪ್ಟಂಬರ್,22,2023(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿವಿಯ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ, ಮರು ಪರೀಕ್ಷೆಗೆ ಮುಂದಾದ ಮುಕ್ತ ವಿವಿ.
ಈ ಸಂಬಂಧ ಪರೀಕ್ಷಾಂಗ ಕುಲಸಚಿವರಿಂದ ವಿವರಣೆ ಪಡೆಯಲಾಗುವುದು ಎಂದು ಜಸ್ಟ್ ಕನ್ನಡಗೆ ಮಾಹಿತಿ ನೀಡಿದ ಮುಕ್ತ ವಿವಿ ಕುಲಸಚಿವ ಕೆ.ಎಲ್.ಎನ್.ಮೂರ್ತಿ.
ಘಟನೆ ಹಿನ್ನೆಲೆ..
‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸೆ.4ರಿಂದ ಪದವಿ ವಿಭಾಗದ ಪರೀಕ್ಷೆಗಳು ಆರಂಭವಾಗಿದ್ದು ಈ ನಡುವೆ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಒಂದು ದಿನ ಮುಂಚಿತವಾಗಿ ವಾಟ್ಸಪ್ ಮೂಲಕ ಮಾರಾಟ ಮಾಡಲಾಗುತ್ತಿದೆ’ ಎಂದು ಆರೋಪ ಕೇಳಿ ಬಂದಿತ್ತು.
ಈ ಸಂಬಂಧ ತೃತೀಯ ಬಿ.ಕಾಂ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಚಂದು ಎಂಬುವರು ಜಯಲಕ್ಷ್ಮಿಪುರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಅನುಮಾನವಿದ್ದ ವಿದ್ಯಾರ್ಥಿಯೊಬ್ಬರು ಖರೀದಿಯ ನೆಪದಲ್ಲಿ ಸೆ.20ರಂದು ನಡೆಯಲಿದ್ದ ಕಂಪ್ಯೂಟರ್ ಇನ್ ಬ್ಯುಸಿನೆಸ್ ವಿಷಯದ ಪ್ರಶ್ನೆ ಪತ್ರಿಕೆ ತರಿಸಿಕೊಂಡಿದ್ದರು. ಪರೀಕ್ಷೆಯ ವೇಳೆ ಎರಡೂ ಪತ್ರಿಕೆಯಲ್ಲೂ ಹೋಲಿಕೆ ಕಂಡುಬಂದಿತ್ತು.
ಮುಕ್ತ ವಿಶ್ವವಿದ್ಯಾಲಯದಲ್ಲಿನ ಪರೀಕ್ಷಾ ಕೇಂದ್ರಕ್ಕೆ ಪೊಲೀಸರು ತೆರಳಿ ಮಹಜರು ನಡೆಸಿದ್ದು ಬಳಿಕ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದು ದೃಢಪಟ್ಟಿದೆ. ರೂ 3 ಸಾವಿರಕ್ಕೆ ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ವಿದ್ಯಾರ್ಥಿಗಳಾದ ನವೀನ್ ಮತ್ತು ಮುರಳಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಪ್ರಶ್ನೆಪತ್ರಿಕೆಯನ್ನು ವಾಟ್ಸಪ್ನಲ್ಲಿ ಕಳುಹಿಸಿದವರು ಯಾರು, ಎಲ್ಲಿಂದ ಕಳುಹಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Key words: KSOU – Question paper- leak-decision – re-exam.