ಮೈಸೂರು,ಜನವರಿ,21,2022(www.justkannada.in): ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮನವಿ ಪತ್ರಗಳನ್ನು ನೇರವಾಗಿ ಕುಲಪತಿಗಳಿಗೆ ಅಥವಾ ಕುಲಪತಿಗಳ ಆಪ್ತ ಕಾರ್ಯಲಯಕ್ಕೆ ಸಲ್ಲಿಸದೆ ಸಮುಚಿತ ಮಾರ್ಗದಲ್ಲೇ ಮನವಿ ಪತ್ರಗಳನ್ನ ಸಲ್ಲಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಕೆಎಸ್ ಒಯು ಕುಲಸಚಿವರು, ವಿಶ್ವವಿದ್ಯಾನಿಲಯದ ಎಲ್ಲಾ ಬೋಧಕ/ಬೋಧಕೇತರ ಸಿಬ್ಬಂದಿ ವರ್ಗದವರು ತಮ್ಮ ಮನವಿ ಪತ್ರಗಳನ್ನು ಸಮುಚಿತ ಮಾರ್ಗದಲ್ಲಿ ಸಲ್ಲಿಸುವಂತೆ ಉಲ್ಲೇಖ(1)ರ ಸುತ್ತೋಲೆಯಲ್ಲಿ ತಿಳಿಸಲಾಗಿದ್ದು, ಅದರಂತೆ ಕ್ರಮ ಅನುಸರಿಸದಿರುವುದು ಕಂಡುಬಂದಿರುತ್ತದೆ.
ಈ ಹಿನ್ನೆಲೆಯಲ್ಲಿ ಮಾನ್ಯಕುಲಪತಿಗಳ ಆದೇಶದ ಮೇರೆಗೆ, ವಿಶ್ವವಿದ್ಯಾನಿಲಯದ ಬೋಧಕ/ಬೋಧಕೇತರ ಸಿಬ್ಬಂದಿ ವರ್ಗದವರು ತಮ್ಮ ಯಾವುದೇ ರೀತಿಯ ಮನವಿ ಪತ್ರಗಳನ್ನು ನೇರವಾಗಿ ಮಾನ್ಯ ಕುಲಪತಿಗಳಿಗೆ ಅಥವಾ ಮಾನ್ಯ ಕುಲಪತಿಗಳ ಆಪ್ತ ಕಾರ್ಯಲಯಕ್ಕೆ ಸಲ್ಲಿಸದೆ, ಕಡ್ಡಾಯವಾಗಿ ಸಮುಚಿತ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಭಾಗ/ಕಚೇರಿಯ ಮುಖ್ಯಸ್ಥರು/ಅಧಿಕಾರಿಗಳ ಮುಖಾಂತರ ಅವರ ಶಿಫಾರಸ್ಸಿನೊಂದಿಗೆ ಕುಲಸಚಿವರಿಗೆ ಸಲ್ಲಿಸಿದಲ್ಲಿ ಮಾತ್ರ ನಿಯಮಾನುಸಾರ ಕ್ರಮ ವಹಿಸಲಾಗುವುದೆಂದು ತಿಳಿಸಲಾಗಿದೆ.
ಮುಂದುವರಿದು, ಯಾವುದೇ ಬೋಧಕ/ಬೋಧಕೇತರ ಸಿಬ್ಬಂದಿ ವರ್ಗದವರು ತಮ್ಮ ಮನವಿಗಳ ಪ್ರತಿ/ಮುಂಗಡ ಪ್ರತಿಗಳನ್ನು ಮಾಹಿತಿಗಾಗಿ ಮಾನ್ಯ ಕುಲಪತಿಗಳ ಆಪ್ತ ಕಾರ್ಯಾಲಯಕ್ಕೆ ನೇರವಾಗಿ ಸಲ್ಲಿಸಿದಲ್ಲಿ ಸ್ವೀಕರಿಸುವುದಿಲ್ಲವೆಂದು ಕೆಎಸ್ ಒಯು ಕುಲಸಚಿವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
Key words: KSOU –staff- submit -Letters – Instructions