ಮೈಸೂರು, ಅ.04, 2019 : (www.justkannada.in news) : ಯುಜಿಸಿ ಕೆಂಗಣ್ಣಿಗೆ ಗುರಿಯಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪುನರಾರಂಭಕ್ಕೆ ಶಾಸಕ ಎಸ್.ಎ.ರಾಮದಾಸ್, ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಅವರ ಸಹಕಾರ ಪ್ರಮುಖ ಕಾರಣ ಎಂದು ಮುಕ್ತ ವಿವಿ ವಿಶ್ರಾಂತ ಕುಲಪತಿ ಪ್ರೊ. ಡಿ.ಶಿವಲಿಂಗಯ್ಯ ಹೇಳಿದರು.
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ದಶಮಾನೋತ್ಸವ ವರ್ಷಾಚರಣೆಯ ‘ ಸಂಸ್ಥಾಪನಾ ದಿನಾಚರಣೆ’ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಡಿ.ಶಿವಲಿಂಗಯ್ಯ ಅವರು ಹೇಳಿದಿಷ್ಟು.
ನಾನು ಮುಕ್ತ ವಿವಿ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ಆಡಳಿತಾತ್ಮಕ ಸಮಸ್ಯೆಗಳಿಂದ ತುಂಬಿತ್ತು. ಯುಜಿಸಿ ಕೆಂಗಣ್ಣು ಬೀರಿದ್ದೇ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಪರಿಣಾಮ ಮಾನ್ಯತೆ ನವೀಕರಣಗೊಳ್ಳದೆ ಪ್ರವೇಶಾತಿ ಸ್ಥಗಿತಗೊಂಡಿತ್ತು. ಈ ಹಂತದಲ್ಲಿ ವಿಶ್ವವಿದ್ಯಾನಿಲಯವನ್ನು ಮುನ್ನಡೆಸುವ ಜವಾಬ್ದಾರಿ ನನ್ನ ಮೇಲಿತ್ತು. ಈ ಹಿಂದೆ ಪರೀಕ್ಷಾಂಗ ಕುಲಸಚಿವ, ಕುಲಸಚಿವನಾಗಿ ಕಾರ್ಯ ನಿರ್ವಹಿಸಿದ್ದ ಅನುಭವದ ಆಧಾರದ ಮೇಲೆ ಇದನ್ನು ಸವಾಲಾಗಿ ಸ್ವೀಕರಿಸಿದೆ. ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಅನಾನುಕೂಲಗಳನ್ನು ಸರಿಪಡಿಸಲು ಟೊಂಕಕಟ್ಟಿದೆ.
ಈ ನನ್ನ ಹೋರಾಟಕ್ಕೆ ಶಾಸಕ ಎಸ್.ಎ.ರಾಮದಾಸ್, ಸಂಸದ ಪ್ರತಾಪಸಿಂಹ ಅವರು ಸಂಪೂರ್ಣ ಸಹಕಾರ ನೀಡಿದರು. ದಿಲ್ಲಿ ಮಟ್ಟದಲ್ಲಿ ಅಧಿಕಾರಿಗಳ ಭೇಟಿ, ಯುಜಿಸಿ ಮುಖ್ಯಸ್ಥರ ಭೇಟಿ ಸಂದರ್ಭದಲ್ಲಿ ಜತೆಗೆ ಆಗಮಿಸಿ ಬೆಂಬಲವಾಗಿ ನಿಂತರು. ಇವರ ಸಹಕಾರದ ಕಾರಣ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಯುಜಿಸಿ ಮರು ಮಾನ್ಯತೆ ಪಡೆಯುವುದು ಸುಲಭವಾಯಿತು . ಅದರಲ್ಲೂ ರಾಮದಾಸ್ ಅವರು, ಅಧಿಕಾರದಲ್ಲಿ ಇಲ್ಲದಿದ್ದರು ಸಹ ಸ್ವಂತ ಹಣ ಖರ್ಚು ಮಾಡಿಕೊಂಡು ನನ್ನೊಟ್ಟಿಗೆ ದಿಲ್ಲಿಗೆ ಹಲವಾರು ಬಾರಿ ಬಂದಿದ್ದರು ಎಂಬುದನ್ನು ಡಿ ಶಿವಲಿಂಗಯ್ಯ ಅವರು ಸ್ಮರಿಸಿಕೊಂಡರು.
ಅಧಿಕಾರದಲ್ಲಿರುವ ವೇಳೆ ನೀತಿ, ನಿಯಮಗಳನ್ನು ಉಲ್ಲಂಘಿಸದೆ ಆಡಳಿತ ನಡೆಸಬೇಕು. ತಪ್ಪಿದಲ್ಲಿ ಮುಂದೆ ಸಮಸ್ಯೆ ಉದ್ಭವಿಸಿದಲ್ಲಿ ಅನ್ಯರು ಯಾರು ಸಹಾಯಕ್ಕೆ ಬರುವುದಿಲ್ಲ ಎಂದು ಪ್ರೊ.ಡಿ.ಶಿವಲಿಂಗಯ್ಯ ಇದೇ ವೇಳೆ ಕಿವಿಮಾತು ಹೇಳಿದರು.
———-
key words : ksou-ugc-shivalingaiha-bjp-support