ಮುಕ್ತ ವಿವಿ ಕುಲಪತಿ ಹುದ್ದೆಯನ್ನು ಸಮರ್ಪಕವಾಗಿ ನಿರ್ವಹಿಸಿದ ಸಾರ್ಥಕತೆ ಇದೆ – ಪ್ರೊ.ಡಿ.ಶಿವಲಿಂಗಯ್ಯ

 

ಮೈಸೂರು, ಮೇ 27, 2019 : (www.justkannada.in news) : ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯುಜಿಸಿ ಮಾನ್ಯತೆಯನ್ನು ಮರಳಿ ದೊರಕಿಸಿಕೊಟ್ಟ ಸಂತೃಪ್ತಿ ಇದೆ ಅಷ್ಟು ಸಾಕು.

ಕೆಎಸ್ಒಯು ಕುಲಪತಿ ಹುದ್ದೆಯ ಅಂತಿಮ ಅವಧಿಯಲ್ಲಿರುವ ಪ್ರೊ.ಡಿ.ಶಿವಲಿಂಗಯ್ಯ ಅವರು ಈ ಸಂತೃಪ್ತ ಭಾವನೆ ವ್ಯಕ್ತಪಡಿಸಿದರು. ಮುಕ್ತ ವಿವಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಜಾರಿಗೊಳಿಸಿರುವ ಹೊಸ ವ್ಯವಸ್ಥೆ ಹಾಗೂ ಯೋಜನೆ ಬಗೆಗೆ ಮಾಹಿತಿ ನೀಡುವ ಸಲುವಾಗಿ ಸೋಮವಾರ ಪತ್ರಿಕಾಗೋಷ್ಠಿ ಕರೆದಿದ್ದರು. ಈ ವೇಳೆ ಮಾತನಾಡಿದ ಅವರು ಹೇಳಿದಿಷ್ಟು…
ಇದೇ ಮೇ 31 ಕ್ಕೆ ನನ್ನ ಕುಲಪತಿ ಹುದ್ದೆಯ ಅವಧಿ ಪೂರ್ಣಗೊಳ್ಳಲಿದೆ. ಮೂರು ವರ್ಷಗಳ ಹಿಂದೆ ನಾನು ಮುಕ್ತ ವಿವಿ ಕುಲಪತಿಯಾಗಿ ನೇಮಕಗೊಂಡು ಅಧಿಕಾರ ಸ್ವೀಕರಿಸಿದ ವೇಳೆ ಯಾವ ಭಾವವಿತ್ತೋ ಈಗಲೂ ಅದೇ ಭಾವನೆಯಿಂದ ನಿರ್ಗಮಿಸುತ್ತಿರುವೆ. ಈ ನಡುವೆ ನಾನು ಬರುವ ಮುನ್ನ ಮುಕ್ತ ವಿವಿ ಎದುರಿಸುತ್ತಿದ್ದ ಬಹು ದೊಡ್ಡ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಟ್ಟ ಬಗ್ಗೆ ತೃಪ್ತಿ ಇದೆ. ಆ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ವೇದಿಕೆ ಸಿದ್ಧಪಡಿಸಿದ ಸಾರ್ಥಕತೆ ಇದೆ ಎಂದರು.

ಮನವಿ ಮಾಡಿಲ್ಲ :

ಕರ್ನಾಟಕ ಮುಕ್ತ ವಿವಿ ಕಾಯ್ದೆ ಪ್ರಕಾರ, ಮೊದಲ ಮೂರು ವರ್ಷಗಳ ಅವಧಿ ಪೂರ್ಣಗೊಂಡ ಬಳಿಕ ಮತ್ತೆ ಒಂದು ವರ್ಷ ಅವಧಿ ವಿಸ್ತರಿಸುವ ಅವಕಾಶವಿದೆ. ಇದು ರಾಜ್ಯಪಾಲರ ವಿವೇಚನೆಗೆ ಬಿಟ್ಟದ್ದು. ನನ್ನ ಅವಧಿ 2019 ರ ಮಾರ್ಚ್ ತಿಂಗಳಿಗೆ ಕೊನೆಗೊಂಡಿತ್ತು. ಆದರೆ ಯುಜಿಸಿ ಮಾನ್ಯತೆ ಬಳಿಕ ಕೆಲ ಪ್ರಮುಖ ಅಗತ್ಯ ಕಾರ್ಯಗಳನ್ನು ತುರ್ತು ಪೂರ್ಣಗೊಳಿಸಲೇ ಬೇಕಾಗಿದ್ದ ಕಾರಣ ಅವಧಿ ವಿಸ್ತರಿಸುವಂತೆ ರಾಜ್ಯಪಾಲರಿಗೆ ಪತ್ರ ಮುಖೇನ ವಿನಂತಿಸಿಕೊಂಡಿದ್ದೆ. ಆಗಲೇ ನನ್ನ ಅಧಿಕಾರದ ಅವಧಿಯನ್ನು ಮೇ 31 ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದು. ಆದರೆ ಈಗ ನಾನು ಮತ್ತೆ ಅವಧಿ ವಿಸ್ತರಿಸುವಂತೆ ಮನವಿ ಮಾಡಿಲ್ಲ. ಕುಲಪತಿ ಹುದ್ದೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ ಸಾರ್ಥಕತೆ ಇದೆ. ಅಷ್ಟು ಸಾಕು ಎಂದು ಪ್ರಶ್ನೆಯೊಂದಕ್ಕೆ ಪ್ರೊ.ಡಿ. ಶಿವಲಿಂಗಯ್ಯ ವಿವರಿಸಿದರು.

ಇತ್ತೀಚೆಗೆ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಅವಧಿಯನ್ನು ಎರಡು ಬಾರಿ ವಿಸ್ತರಿಸಿದ ಘಟನೆಯನ್ನು ನೆನಪಿಸಿದ ಮಾಧ್ಯಮ ಪ್ರತಿನಿಧಿಯೊಬ್ಬರು, ಮತ್ತೆ ಮುಕ್ತ ವಿವಿ ಕುಲಪತಿ ಹುದ್ದೆ ಅವಧಿ ವಿಸ್ತರಿಸುವ ಅವಕಾಶವಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಅದು ರಾಜ್ಯಪಾಲರ ವಿವೇಚನಗೆ ಬಿಟ್ಟದ್ದು. ನಾನು ಎರಡನೇ ಬಾರಿ ಅವಧಿ ವಿಸ್ತರಿಸುವಂತೆ ರಾಜ್ಯಪಾಲರಿಗೆ ಈಗ ಯಾವುದೇ ಕೋರಿಕೆಯನ್ನು ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.


key words : KSOU-VC- shivalinagiah-responisblity-mysore