ಮೈಸೂರು,ಜನವರಿ,22,2021(www.justkannada.in): ಮೂವರು ಯುವಕರು ಕ್ಷುಲ್ಲಕ ಕಾರಣಕ್ಕೆ ಕೆಎಸ್ ಆರ್ ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನ ಜತೆ ಜಗಳ ತೆಗೆದು ಬಸ್ ಚಾಲಕನ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.
ಹುಣಸೂರು ತಾಲೂಕು ಹೊಸ ರಾಮೇನಹಳ್ಳಿ ಬಳಿ ಈ ಘಟನೆ ನಡೆದಿದೆ. ಕೆಎಸ್ ಆರ್ ಟಿಸಿ ಬಸ್ ಚಾಲಕ ವೆಂಕಟೇಶ್ ಹಲ್ಲೆಗೊಳಗಾದವರು. ನಿನ್ನೆ ಸಂಜೆ 6:00 ಗಂಟೆ ವೇಳೆಯಲ್ಲಿ ಮೈಸೂರು ಕಡೆಯಿಂದ ಹಾಸನ ಕಡೆಗೆ ಪಿರಿಯಾಪಟ್ಟಣ ಘಟಕಕ್ಕೆ ಸೇರಿದ KSRTC ಬಸ್ ನಂ KA-45 F 007 ರೂಟ್ ನಂ 59/60 ಬಸ್ ತೆರಳುತ್ತಿತ್ತು. ಹುಣಸೂರು ತಾಲೂಕು ಹೊಸ ರಾಮೇನಹಳ್ಳಿ ಬಳಿ ಬಸ್ ಹೋಗುತ್ತಿದ್ದಾಗ ರಸ್ತೆ ಮಧ್ಯಕ್ಕೆ ಹಸುಗಳ ಬಂದಿದ್ದು ಆ ಸಮಯದಲ್ಲಿ ಬಸ್ ಅನ್ನು ಸ್ವಲ್ಪ ಬಲಭಾಗಕ್ಕೆ ಚಾಲಕ ವೆಂಕಟೇಶ್ ತಿರಿಗಿಸಿದ್ದಾರೆ.
ಇದೇ ವೇಳೆ ಕೆ.ಆರ್ ನಗರ ಕಡೆಯಿಂದ ಮೈಸೂರು ಕಡೆಗೆ ಪಲ್ಸರ್ ಬೈಕ್ ನಂಬರ್ KA 09 0939 ರಲ್ಲಿ ಬರುತ್ತಿದ್ದ ಮೂವರು ಯುವಕರು ಬಸ್ಸನ್ನು ಅಡ್ಡಗಟ್ಟಿ ಚಾಲಕ-ನಿರ್ವಾಹಕರ ಜೊತೆ ಜಗಳ ತೆಗೆದು ಗಲಾಟೆ ಮಾಡಿದ್ದಾರೆ. ತದನಂತರ ಅದರಲ್ಲಿದ್ದ ಒಬ್ಬ ಯುವಕ ಅವನ ಬಳಿ ಇದ್ದ ಚಾಕುವಿನಿಂದ ಚಾಲಕ ವೆಂಕಟೇಶ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತದನಂತರ ಜನಸಂದಣಿ ಹೆಚ್ಚಾದ ಹಿನ್ನೆಲೆ ಅಲ್ಲಿದ್ದ ಮೂವರು ಯುವಕರು ಅಲ್ಲಿಂದ ಬೈಕ್ ನಲ್ಲಿ ಮೈಸೂರು ಕಡೆಗೆ ಪರಾರಿಯಾಗಿದ್ದಾರೆ.
ಈ ಸಂಬಂಧ ಬಸ್ ನಿರ್ವಾಹಕ ಹರೀಶ್ ಬಿಳಿಕೆರೆ ಠಾಣೆಗೆ ದೂರು ನೀಡಿದ್ದು ದೂರಿನ ಮೇರೆಗೆ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾರಣಾಂತಿಕ ಹಲ್ಲೆಗೊಳಗಾದ ಚಾಲಕ ವೆಂಕಟೇಶ ಅವರನ್ನ ಮೈಸೂರಿನ ಗೋಪಾಲಗೌಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿಯಿಂದ ತಿಳಿದು ಬಂದಿದೆ.
Key words: KSRTC- bus driver -assult – youth-mysore