KSRTC ಬಸ್ ಪ್ರಯಾಣಕ್ಕೂ ಬಂತು ‘ಡಿಜಿಟಲ್ ಪೇಮೆಂಟ್ ಸಿಸ್ಟಮ್‌’

ಮೈಸೂರು,ನವೆಂಬರ್,18,2024 (www.justkannada.in):  ಪ್ರಯಾಣಿಕರಿಗೆ ಆಗುತ್ತಿದ್ದ ಚಿಲ್ಲರೆ ಸಮಸ್ಯೆ, ಟಿಕೆಟ್ ವಿತರಣೆಯ ವಿಳಂಬ ಸಮಸ್ಯೆಗೆ ಪರಿಹಾರವಾಗಿ ಇದೀಗ ಕೆಎಸ್ಆರ್ ಟಿಸಿ ಬಸ್ ಪ್ರಯಾಣದಲ್ಲಿ  ಡಿಜಿಟಲ್ ಪೇಮೆಂಟ್ ಸಿಸ್ಟಮ್‌ ಬಳಕೆಗೆ ಸರ್ಕಾರ ಮುಂದಾಗಿದ್ದು ಈ ಮೂಲಕ ಕೆಎಸ್ಆರ್ ಟಿಸಿ ನಿಗಮ  ಮಹತ್ವದ ಹೆಜ್ಜೆ ಇರಿಸಿದೆ.

ರಾಜ್ಯಾದ್ಯಂತ ಎಲ್ಲಾ ಕೆಎಸ್ಆರ್ ಟಿಸಿಯಲ್ಲೂ ಇ ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಲು ನಿಗಮ ಮುಂದಾಗಿದೆ. ಪ್ರಯಾಣಿಕರಿಗೆ ಆಗುತ್ತಿದ್ದ ಚಿಲ್ಲರೆ ಸಮಸ್ಯೆ, ಟಿಕೆಟ್ ವಿತರಣೆಯ ವಿಳಂಬ ಸಮಸ್ಯೆ ತಪ್ಪಿಸಲು ಕ್ಯೂ ಆರ್ ಕೋಡ್ ಸ್ಕ್ಯಾನ್ ಮೂಲಕ ಟಿಕೆಟ್ ಖರೀದಿ ಮಾಡುವ ಅವಕಾಶ ಇದಾಗಿದೆ.

ಮೊಬೈಲ್ ನಲ್ಲಿ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ ಟಿಕೆಟ್ ಮೆಷಿನ್ ನಲ್ಲಿ ಇರುವ ಕ್ಯೂಆರ್ ಕೋಡ್ ಸ್ಕ್ಯಾನ್  ಮಾಡಬಹುದು. ಸ್ಕ್ಯಾನ್ ಮಾಡುತ್ತಿದ್ದಂತೆ ದರ, ಎಲ್ಲಿಂದ ಎಲ್ಲಿಗೆ ಎನ್ನುವ ವಿವರ ಹೇಳಿ ಟಿಕೆಟ್ ಪಡೆಯಬಹುದು.  ಕೆಎಸ್ಆರ್ ಟಿಸಿ ನಿಗಮದ ನಿರ್ಧಾರಕ್ಕೆ ಕಂಡಕ್ಟರ್ ಗಳಲ್ಲಿ ಸಂತಸ ಮನೆ ಮಾಡಿದ್ದು  ಈ ವ್ಯವಸ್ಥೆಗೆ  ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಡಿಜಿಟಲ್ ಪೇಮೆಂಟ್ ಅಕ್ಷರಸ್ಥರಿಗೆ ಸರಿ, ಅನಕ್ಷರಸ್ಥರು ಏನ್ ಮಾಡುತ್ತಾರೆ ? ಎಂದು ಕೆಲ ಪ್ರಯಾಣಿಕರು ಅಭಿಪ್ರಾಯ ವ್ಯಕ್ತಪಡಿಸಿದರೆ ಡಿಜಿಟಲ್ ಪೇಮೆಂಟ್ ಜೊತೆಗೆ ಟಿಕೆಟ್ ಕೊಡುವ ವ್ಯವಸ್ಥೆಯೂ ಇರಲಿ ಎಂದು ಕೆಲವು ಪ್ರಯಾಣಿಕರು ಹೇಳುತ್ತಾರೆ.

ಈ ಕುರಿತು ಮಾತನಾಡಿರುವ ಡಿಟಿಓ ಅಧಿಕಾರಿ ಹೇಮಂತ್,  ಸದ್ಯಕ್ಕೆ ಮೈಸೂರಿನಿಂದ 300 ಕ್ಕೂ ಹೆಚ್ಚು ಬಸ್ ಗಳಲ್ಲಿ ಇ ಪೇಮೆಂಟ್ ವ್ಯವಸ್ಥೆ ಜಾರಿ ಮಾಡಲಾಗುತ್ತದೆ. ಹೆಚ್ಚಾಗಿ ಲಾಂಗ್ ರೂಟ್ ಗೆ ಹೋಗುವ ಬಸ್ ಗಳಲ್ಲಿ ಇ ಪೇಮೆಂಟ್ ವ್ಯವಸ್ಥೆ ಜಾರಿಯಾಗಲಿದೆ. ಬೆಂಗಳೂರು ಮೈಸೂರು ನಾನ್ ಸ್ಟಾಪ್ ಬಸ್ ಗಳು, ಮಂಗಳೂರು, ಬೆಂಗಳೂರು, ಊಟಿ, ಕೇರಳ, ತಮಿಳುನಾಡು ಸೇರಿದಂತೆ ಅಂತರ ರಾಜ್ಯ ಬಸ್ ಗಳಲ್ಲಿ ಹೆಚ್ಚಿನ ಡಿಜಿಟಲ್ ಪೇಮೆಂಟ್ ಬಳಕೆ ಮಾಡಲಾಗುತ್ತದೆ. ಮುಂದಿನ‌ ದಿನಗಳಲ್ಲಿ ರಾಜ್ಯದ ಎಲ್ಲಾ ಭಾಗದಲ್ಲೂ ಎಲ್ಲಾ ಡಿಪೋಗಳಲ್ಲೂ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿ ಮಾಡಲಾಗುತ್ತದೆ. ಸದ್ಯಕ್ಕೆ ಮೈಸೂರು ಬೆಂಗಳೂರು ರೂಟ್ ನಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

Key words: KSRTC, ‘Digital Payment System, bus, travel