ಕೆಎಸಾರ್ಟಿಸಿ ಬಸ್‌ ಟೈರ್‌ ಪಂಚರ್‌ : ಕಾರಿಗೆ ಡಿಕ್ಕಿ, ಟೆಕ್ಕಿ ಸಾವು.

KSRTC bus tyre puncture: Techie killed as car collides with bus

 

ಮಂಡ್ಯ, ಮಾ.೦೧,೨೦೨೫: ಟಾಟಾ ನಿಕ್ಸಾನ್ ಕಾರಿಗೆ ಕೆಎಸ್ ಆರ್ ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ವಿ.ಮನು (36) ಎಂಬುವವರು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪ ಬೋರಾಪುರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಪತ್ರಕರ್ತೆ ಹರವು ಸ್ಪೂರ್ತಿ ಅವರ ಪತಿ, ಕೆ.ಎಂ.ದೊಡ್ಡಿ ವೆಂಕಟೇಶ್ ಅವರ ಪುತ್ರ ಬೆಂಗಳೂರಿನ ಖಾಸಗಿ ಕಂಪೆನಿಯ ಸಾಪ್ಟ್ ವೇರ್ ಇಂಜಿನಿಯರ್ ವಿ.ಮನು ಮೃತ ವ್ಯಕ್ತಿ.

ಶನಿವಾರ ಬೆಂಗಳೂರಿನಿಂದ ಸ್ವಗ್ರಾಮ ಕೆ..ಎಂ.ದೊಡ್ಡಿಗೆ ಮೃತ ವ್ಯಕ್ತಿ ವಿ.ಮನು ಟಾಟಾ ನಿಕ್ಸಾನ್ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಾಗ ಮಳವಳ್ಳಿಯಿಂದ ಕೆ.ಎಂ.ದೊಡ್ಡಿ ಮಾರ್ಗ ಮದ್ದೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ.

ಬಸ್ ನ ಮುಂಬದಿಯ ಚಕ್ರ ಪಂಕ್ಚರ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ವಿ.ಮನು ಅವರನ್ನು ಮದ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿ‌ನ ಚಿಕಿತ್ಸೆಗೆ ಮಂಡ್ಯ ಮಿಮ್ಸ್ ಗೆ ಕರೆತರುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದರು.

ಮೃತರಿಗೆ 6 ವರ್ಷದ ಮಗ ಸುಧನ್ವ, ಪತ್ನಿ ಪತ್ರಕರ್ತೆ ಹರವು ಸ್ಪೂರ್ತಿ ಹಾಗೂ ಪತ್ರಕರ್ತ, ಲೇಖಕ ಹರವು ದೇವೇಗೌಡ ಸೇರಿದಂತೆ ಅಪಾರ ಬಂಧುಗಳಿದ್ದಾರೆ. ಮೃತರ ಅಂತ್ಯಕ್ರಿಯೆ ಕೆ.ಎಂ.ದೊಡ್ಡಿ ಬಳಿಯ ಮೆಣಸಗೆರೆಯಲ್ಲಿ ಭಾನುವಾರ ಮಧ್ಯಾಹ್ನ 12ಕ್ಕೆ ನಡೆಯಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದ್ದು, ಬಸ್ ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

key words: KSRTC, bus, Tyre puncture, Techie killed, car collides with bus

KSRTC bus Tyre puncture: Techie killed as car collides with bus