ಮೈಸೂರು, ಫೆಬ್ರವರಿ 20, 2022 (www.justkannaa.in): ಹಿಜಾಬ್ ಕೇಸರಿ ವಿಚಾರ ಮುಂದಿಟ್ಟುಕೊಂಡು ವಿದ್ಯಾರ್ಥಿಗಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಕಳವಳ ವ್ಯಕ್ತಪಡಿಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್. ಹಿಜಾಬ್ ಕೇಸರಿ ವಿಚಾರ ಮುಂದಿಟ್ಟುಕೊಂಡು ಜಾತಿಯ ವಿಷ ಬೀಜ ಬಿತ್ತಲಾಗುತ್ತಿದೆ. ಇದಕ್ಕೆ ರಾಜಕಾರಣಿಗಳು ಹೊಣೆಗಾರರಾಗಿದ್ದಾರೆ. ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಾ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.
ರಾಜಕಾರಣಿಗಳ ಆಟಕ್ಕೆ ವಿದ್ಯಾರ್ಥಿಗಳು ಬಲಿಯಾಗಬಾರದು. ಶಾಲಾ ಶಿಕ್ಷಕರ ಮಾತಿಗೆ ಬೆಲೆ ಕೊಡಬೇಕು. ಈಗಾಗಲೇ ದೇಶ ಕಟುಕರ ಕಪಿಮುಷ್ಠಿಗೆ ಸಿಲುಕಿದೆ. ಚುನಾವಣೆಯಲ್ಲಿ ಬಹುತೇಕ ಮಂದಿ ರಿಯಲ್ ಎಸ್ಟೇಟ್ ದಂಧೆಕೋರರು, ಪುಂಢ ಪೋಕರಿಗಳು ಆರಿಸಿ ಬರುತ್ತಿದ್ದಾರೆ. ಇಂತಹದಕ್ಕೆಲ್ಲಾ ಜನರು ಮುಂದಿನ ಚುನಾವಣೆಯಲ್ಲಿ ಕಡಿವಾಣ ಹಾಕಬೇಕು ಎಂದು ಕುರುಬೂರು ಶಾಂತಕುಮಾರ್ ಹೇಳಿದರು.
ವಿಧಾನ ಮಂಡಲದ ಅಧಿವೇಶನದಲ್ಲಿ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಸಣ್ಣಪುಟ್ಟ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ. ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ. ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ. ಶಾಸಕರಿಗೆ ನೀಡುತ್ತಿರುವ ಸಂಬಳ ಭತ್ಯೆಗಳನ್ನು ಕಡಿತ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಜನರ ತೆರಿಗೆ ಹಣದಿಂದ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ವಾಹನಗಳ ಖರೀದಿ ವೇಳೆಯಲ್ಲೇ ರಸ್ತೆ ತೆರಿಗೆ ವಸೂಲಿ ಮಾಡಲಾಗುತ್ತದೆ. ಯಾವುದೇ ವಸ್ತುಗಳನ್ನು ಖರೀದಿ ಮಾಡುವಾಗಲೂ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಇದರ ಜೊತೆಗೆ ಟೋಲ್ ಸಂಗ್ರಹ ಮಾಡುವುದು ಸರಿಯಾದ ಕ್ರಮವಲ್ಲ. ಕೂಡಲೇ ಟೋಲ್ ಸಂಗ್ರಹ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.