ಕೋಲಾರ, ಆಗಸ್ಟ್, 30, 2024 (www.justkannada.in): ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ರಾಜ್ಯದಲ್ಲಿ ಕುಸುಮ್ ಬಿ ಮತ್ತು ಕುಸುಮ್ ಸಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಕೋಲಾರದಂತಹ ಜಿಲ್ಲೆಗಳಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಕೋಲಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳ ಜತೆ ಸಭೆ ನಡೆಸಿದ ಸಚಿವ ಕೆ.ಜೆ ಜಾರ್ಜ್, “ಕುಸುಮ್ ಬಿ ಯೋಜನೆಯಡಿ ಸೋಲಾರ್ ಪಂಪ್ ಸೆಟ್ ಗಳನ್ನು ಅಳವಡಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಶೇ. 30 ಮತ್ತು ರಾಜ್ಯ ಸರ್ಕಾರದಿಂದ ಶೇ. 50ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಒಟ್ಟು ವೆಚ್ಚದ ಶೇ. 20ನ್ನು ಫಲಾನುಭವಿಗಳು ಭರಿಸಿದರೆ ರೈತರಿಗೆ ಸರ್ಕಾರದಿಂದಲೇ ಪಂಪ್ ಸೆಟ್ ಗಳನ್ನು ಅಳವಡಿಸಿಕೊಡಲಾಗುವುದು. ರಾಜ್ಯ ಸರ್ಕಾರ ಸಬ್ಸಿಡಿ ಹೆಚ್ಚಿಸಿರುವುದರಿಂದಲೇ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಯೋಜನೆಗೆ ನೋಂದಾಯಿಸಿದ್ದಾರೆ,” ಎಂದರು.
“ಅದೇ ರೀತಿ ಕುಸುಮ್ ಸಿ ಫೀಡರ್ ಸೋಲಾರೈಸೇಶನ್ ಯೋಜನೆಯಡಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ ಸಮೀಪದ ಸಬ್ ಸ್ಟೇಷನ್ ಗೆ ವಿದ್ಯುತ್ ಒದಗಿಸಲಾಗುತ್ತದೆ. ಆಯಾ ಸಬ್ ಸ್ಟೇಷನ್ ವ್ಯಾಪ್ತಿಯಲ್ಲೇ ಆ ವಿದ್ಯುತ್ ಪೂರೈಕೆಯಾಗುವುದರಿಂದ ಗ್ರಾಹಕರಿಗೆ ವಿದ್ಯುತ್ ಸಮಸ್ಯೆ ಇಲ್ಲದಂತಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸೋಲಾರ್ ಘಟಕಗಳನ್ನು ಸ್ಥಾಪಿಸಲಾಗುವುದು. ಒಂದು ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ 4 ಎಕರೆ ಜಮೀನು ಬೇಕಿದ್ದು, ಖಾಸಗಿ ಭೂಮಿಗೆ ಪ್ರತಿ ಎಕರೆಗೆ ವಾರ್ಷಿಕ 25 ಸಾವಿರ ರೂ. ನೀಡಲಾಗುತ್ತದೆ. ಸರ್ಕಾರಿ ಭೂಮಿಯಾದರೆ ಇಂಧನ ಇಲಾಖೆಯಿಂದ ಜಿಲ್ಲಾಧಿಕಾರಿಗಳ ಬಳಿ ಪ್ರತಿ ಎಕರೆಗೆ 25 ಸಾವಿರ ರೂ. ಠೇವಣಿ ಇಟ್ಟು ಆ ಮೊತ್ತವನ್ನು ಆ ಭಾಗದ ಅಂಗನವಾಡಿ, ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ವೆಚ್ಚ ಮಾಡಲಾಗುವುದು,” ಎಂದು ತಿಳಿಸಿದರು.
“ರಾಜ್ಯದಲ್ಲಿ ಪ್ರಸ್ತುತ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದೆ. ಅದರ ಸಮರ್ಪಕ ಪೂರೈಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೆಚ್ಚುವರಿ ಸಬ್ ಸ್ಟೇಷನ್ ಗಳ ನಿರ್ಮಾಣ, ಟ್ರಾನ್ಸ್ ಫಾರಂಗಳ ಉನ್ನತೀಕರಣ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೆಚ್ಚುವರಿ ವಿದ್ಯುತ್ ಅಗತ್ಯವಿದ್ದರೆ ವಿದ್ಯುತ್ ಖರೀದಿ ಬದಲು ಇತರೆ ರಾಜ್ಯಗಳೊಂದಿಗೆ ವಿದ್ಯುತ್ ವಿನಿಮಯ ಮಾಡಿಕೊಂಡು ಇಲಾಖೆಗೆ ಹೊರೆಯಾದಗದಂತೆ ನೋಡಿಕೊಳ್ಳಲಾಗುತ್ತಿದೆ,” ಎಂದು ಹೇಳಿದರು.
ಗ್ರಾಮಗಳಿಗೆ ಪರ್ಯಾಯ ಇಂಧನ ವ್ಯವಸ್ಥೆ
“ಜಿಲ್ಲೆಯ ಅಂಚಿನಲ್ಲಿ ಇರುವ ಕೆಲವು ಗ್ರಾಮಗಳಲ್ಲಿ ಅವಿರತ ವಿದ್ಯುತ್ ಸಂಪರ್ಕ ಒದಗಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯ ಇಂಧನ ವ್ಯವಸ್ಥೆಗಳಾದ ಪವನ ವಿದ್ಯುತ್ ಅಥವಾ ಸೌರ ವಿದ್ಯುತ್ ವ್ಯವಸ್ಥೆ ಮಾಡಿಕೊಡಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರದ ಯೋಜನೆಯನ್ನು ಬಳಸಿಕೊಳ್ಳಲಾಗುವುದು,” ಎಂದು ಸಚಿವ ಕೆ.ಜೆ ಜಾರ್ಜ್ ತಿಳಿಸಿದರು.
“ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಲ್ಲಿರುವುದರಿಂದ ಕೇಂದ್ರ ಸರ್ಕಾರದ ಸೂರ್ಯ ಘರ್ ಯೋಜನೆಗೆ ಅಷ್ಟೊಂದು ಬೇಡಿಕೆ ಇಲ್ಲ. ಇದರ ಹೊರತಾಗಿಯೂ ಸೂರ್ಯ ಘರ್ ಯೋಜನೆ ಕುರಿತಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜನ ಜಾಗೃತಿ ಮೂಡಿಸಲಾಗುವುದು ಎಂದು ಸಚಿವ ಕೆ.ಜೆ ಜಾರ್ಜ್ ಮಾಹಿತಿ ನೀಡಿದರು.
ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಸಂರ್ಕದಲ್ಲಿರಬೇಕು
ಸಭೆಯಲ್ಲಿ ಜಿಲ್ಲೆಯ ಶಾಸಕರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಹೇಳಿಕೊಂಡಾಗ ಪ್ರತಿಕ್ರಿಯಿಸಿದ ಸಚಿವ ಕೆ.ಜೆ ಜಾರ್ಜ್, “ಜನತೆ ತಮ್ಮ ಸಮಸ್ಯೆಗಳನ್ನು ನೇರವಾಗಿ ಶಾಸಕರೊಂದಿಗೆ ಹೇಳಿಕೊಳ್ಳುತ್ತಾರೆ. ಹೀಗಾಗಿ ಅವರಿಗೆ ಸಮಸ್ಯೆಯ ಬಗ್ಗೆ ಅರಿವಿರುತ್ತದೆ. ಆದ್ದರಿಂದ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಬೆಸ್ಕಾಂ ಎಂಜಿನಿಯರ್ ಗಳು ತಮ್ಮ ವ್ಯಾಪ್ತಿಯ ಶಾಸಕರ ಜತೆ ಸಂಪರ್ಕದಲ್ಲಿದ್ದು, ಅವರ ಸಲಹೆಗಳನ್ನು ಪಡೆದು ಕೆಲಸ ನಿರ್ವಹಿಸಬೇಕು,” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೃಹಜ್ಯೋತಿ: ಕೋಲಾರ ಜಿಲ್ಲೆಗೆ 152 ಕೋಟಿ ರು. ಬಿಡುಗಡೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯಡಿ ಕೋಲಾರ ಜಿಲ್ಲೆಗೆ ಕಳೆದ ಒಂದು ವರ್ಷದಲ್ಲಿ 152 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ 4,12,732 ಗೃಹ ಬಳಕೆದಾರರಿದ್ದು, ಈ ಪೈಕಿ 3,92,965 ಮಂದಿ ಇದಕ್ಕೆ ಅರ್ಹರಾಗಿದ್ದಾರೆ. ಅವರಲ್ಲಿ 3,66,157 ಮಂದಿ ಯೋಜನೆಯ ಫಲಾನುಭವಿಗಳಾಗಿದ್ದು, ಶೇ. 93ರಷ್ಟು ಪ್ರಗತಿ ಸಾಧಿಸಲಾಗಿದೆ. ಇವರು ಬಳಸಿದ ವಿದ್ಯುತ್ತಿನ ಮೊತ್ತ 152 ಕೋಟಿ ರು.ಅನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಸಂಸದ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರೂ ಆಗಿರುವ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಾಶಿವಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಸೇರಿದಂತೆ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Kusum Yojana, farmers, electricity problem, Minister, KJ George