ಬೆಂಗಳೂರು,ಫೆಬ್ರವರಿ,15,2023(www.justkannada.in): ಪತ್ರಕರ್ತರು ವೃತ್ತಿಬದ್ಧತೆಯಿಂದ ಕೆಲಸ ಮಾಡಬೇಕು ಎನ್ನುವುದು ಸಮಾಜದ ನಿರೀಕ್ಷೆ. ಇತ್ತೀಚಿನ ಅವಸರದ ಪತ್ರಿಕೋದ್ಯಮದಲ್ಲಿ ಆ ವೃತ್ತಿಬದ್ಧತೆ ಕಡಿಮೆಯಾತ್ತಿರುವುದು ಕಳವಳಕಾರಿ ಸಂಗತಿ ಎಂದು ವಿಧಾನ ಪರಿಷತ್ ನ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಹಮ್ಮಿಕೊಂಡಿದ್ದ ಡಿವಿಜಿ ನೆನಪು ಹಾಗೂ ಪತ್ರಕರ್ತರಿಗೆ ಗೌರವ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಗುಂಡಪ್ಪನವರು ಹುಟ್ಟು ಹಾಕಿದ ಪತ್ರಕರ್ತರ ಸಂಘಟನೆಗೆ 91 ವಸಂತಗಳು ತುಂಬಿರುವುದು ಸಂಭ್ರಮ ಸಡಗರದ ಸಂಗತಿ. ಹಳೆ ತಲೆಮಾರಿನ ಪತ್ರಕರ್ತರನ್ನು ಮತ್ತು ಅವರ ವೃತ್ತಿಪರತೆಯನ್ನು ಈಗಿನ ತಲೆಮಾರಿನವರಿಗೆ ನೆನಪಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಕೆಯುಡಬ್ಲ್ಯೂಜೆ ಉತ್ತಮ ಕಾರ್ಯಕ್ರಮವನ್ನು ರೂಪಿಸಿ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದ ನಾನು ಇಷ್ಟು ಸುಧೀರ್ಘ ಅವಧಿಯ ಕಾಲ ರಾಜಕಾರಣದಲ್ಲಿ ಇರುತ್ತೇನೆ ಎಂದುಕೊಂಡಿರಲಿಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ಈ ರೀತಿಯ ಅನಿವಾರ್ಯ ತಿರುವುಗಳೇ ಎತ್ತರಕ್ಕೆ ಕರೆದುಕೊಂಡು ಹೋಗಿವೆ. ಅವಕಾಶಗಳನ್ನು ಸವಾಲಾಗಿ ಸ್ವೀಕರಿಸಿ ಬೆಳೆಯುವ ಮನಸ್ಥಿತಿಯನ್ನು ನಾವು ರೂಪಿಸಿಕೊಳ್ಳಬೇಕು ಎಂದರು.
ಡಿ ವಿ ಗುಂಡಪ್ಪನವರು 1932ರಲ್ಲಿ ಈ ಸಂಘವನ್ನು ಬೆರಳೆಣಿಕೆಯ ಸದಸ್ಯರೊಂದಿಗೆ ಆರಂಭಿಸಿದರು. ಇಂದು ಅದು 8 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಬೃಹಾದಾಕಾರವಾಗಿ ಬೆಳೆದಿದೆ, ರಾಜ್ಯದ ಎಲ್ಲೆಡೆಯ ಪ್ರಾತಿನಿಧ್ಯವನ್ನು ಹೊಂದಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಅವರು ಅಭಿಪ್ರಾಯಪಟ್ಟರು.
ಪತ್ರಕರ್ತರಿಗೆ ನೀಡುವ ಪ್ರಶಸ್ತಿಗಳು ಪತ್ರಿಕೋದ್ಯಮದ ವೃತ್ತಿಪರತೆಯತ್ತ ತುಡಿಯಲು ಕಾರಣವಾಗುತ್ತವೆ. ವೃತ್ತಿಪರರಿಗೆ ಪ್ರಶಸ್ತಿಗಳನ್ನು ನೀಡಿ ಬೆನ್ನು ತಟ್ಟುವ ಕೆಲಸವನ್ನು ಕೆಯುಡಬ್ಲ್ಯೂಜೆ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಕನ್ನಡದ ಪತ್ರಕರ್ತರೊಬ್ಬರಾದ ರುದ್ರಣ್ಣ ಅವರಿಗೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಉತ್ಕೃಷ್ಟತಾ ಪ್ರಶಸ್ತಿ ಸಂದಿರುವುದು ಗೌರವದ ವಿಷಯ. ಕೇಂದ್ರ ಸಾಹಿತ್ಯ ಅಕಾಡೆಮಿ ಮನ್ನಣೆ ಪತ್ರಕರ್ತ ಸಾಹಿತಿಗಳಿಗೆ ಗರಿ ಮೂಡಿಸಿದೆ ಎಂದರು.
ಹಿರಿಯ ಪತ್ರಕರ್ತರುಗಳಾದ ಶೇಷಚಂದ್ರಿಕಾ ಹಾಗೂ ಈಶ್ವರ ದೈತೋಟ ಅವರು ಡಿವಿಜಿ ನೆನಪುಗಳನ್ನು ಹಂಚಿಕೊಂಡರು. ಕೋವಿಡ್ ಸಂದರ್ಭದಲ್ಲಿ ಮಾಡಿದ ಕೆಲಸ ಶ್ಲಾಘನೀಯ ಎಂದರು.
ರುದ್ರಣ್ಣ ಹರ್ತಿಕೋಟೆ, ಪದ್ಮರಾಜ ದಂಡಾವತಿ, ವೈ ಗ ಜಗದೀಶ್, ಅಜಿತ್ ಹನುಮಕ್ಕನವರ್, ರಾಧಾಕೃಷ್ಣ ಭಡ್ತಿ, ಕೆ ಎಸ್ ಸೋಮಶೇಖರ್, ಡಿ ಜಿ ಮಮತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕೆಯುಡಬ್ಲ್ಯೂಜೆಯ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್, ಸೋಮಶೇಖರ ಗಾಂಧಿ, ಮು ವೆಂಕಟೇಶ್ ಅವರನ್ನು ಅಭಿನಂದಿಸಲಾಯಿತು.
ಕೆಯುಡಬ್ಲ್ಯೂಜೆಯ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್, ಸ್ವಾಗತಿಸಿದರು. ಖಜಾಂಚಿ ವಾಸುದೇವ ಹೊಳ್ಳ ವಂದಿಸಿದರು.
Key words: KUWJ- Basavaraja Horati -advises -journalists