ಬೆಂಗಳೂರು,ಆಗಸ್ಟ್,22,2022(www.justkannada.in): ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಗುರುಲಿಂಗ ಸ್ವಾಮಿ ಹೊಳಿಮಠ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿರುವ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶಿವಾನಂದ ತಗಡೂರು, ವಿಜಯವಾಣಿ, ಕನ್ನಡ ಪ್ರಭ, ವಿಜಯ ಕರ್ನಾಟಕ, ಸುದ್ದಿಮೂಲ, ಈ ಟಿವಿ, ಟಿವಿ5 ಸೇರಿದಂತೆ ಹಲವು ಮಾಧ್ಯಮಗಳಲ್ಲಿ ನಾನಾ ಹಂತದಲ್ಲಿ ಕೆಲಸ ಮಾಡಿದ ಗುರುಲಿಂಗ ಸ್ವಾಮಿ, ಸವಾಲುಗಳ ಸಂದರ್ಭಗಳಲ್ಲಿಯೂ ತಮ್ಮ ವೃತ್ತಿ ಬದ್ಧತೆಯನ್ನು ಕಾಪಿಟ್ಟಕೊಂಡೇ ಬಂದವರು.
ಮುಖ್ಯಮಂತ್ರಿ ಮಾಧ್ಯಮ ಸಂಯೋಜಕರಾಗಿ ನೇಮಕಗೊಂಡ ದಿನವೂ ಹಿಗ್ಗಲಿಲ್ಲ, ಗರ್ವದಿಂದ ನಡೆದುಕೊಳ್ಳಲಿಲ್ಲ. ಅದೇ ಸರಳ ಸಜ್ಜನಿಕೆಯಿಂದ ನಗು ಮುಖದಲ್ಲಿ ಎಲ್ಲರನ್ನೂ ಮಾತನಾಡಿಸಿ, ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಬಂದಿದ್ದವರು. ಕಷ್ಟಗಳಿಗೆ ಸ್ಪಂದಿಸುವ ಮನಸಿದ್ದ ಸಹೃದಯಿ. ಎಲ್ಲರೊಂದಿಗೆ ಮೆಲು ಮಾತಿನಲ್ಲಿ ಮಾತನಾಡುತ್ತಲೇ ಪ್ರೀತಿ ಸಂಪಾದಿಸಿದ ಸ್ನೇಹ ಜೀವಿ ಇನ್ನಿಲ್ಲ ಎನ್ನುವುದು ಅರಗಿಸಿಕೊಳ್ಳಲಾರದ ಸಂಗತಿ.
ಕವಿಪವಿ, ಉತ್ತರ ಕರ್ನಾಟಕ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ತನ್ನದೇ ಆದ ಸೇವೆ ಕೊಡುಗೆ ನೀಡಿರುವುದನ್ನು ಮರೆಯಲಾಗದು. ಹಾಸನದಲ್ಲಿ ನಡೆದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ 32ನೇ ರಾಜ್ಯ ಸಮ್ಮೇಳನದಲ್ಲಿ ಕೆಯುಡಬ್ಲ್ಯೂಜೆ ಪ್ರಶಸ್ತಿಗೂ ಗುರುಲಿಂಗ ಸ್ವಾಮಿ ಭಾಜನರಾಗಿದ್ದರು. ಕೆಯುಡಬ್ಲ್ಯೂಜೆ ಸಕ್ರೀಯ ಸದಸ್ಯರಾಗಿ ಸದಾ ಕ್ರೀಯಾಶೀಲವಾಗಿದ್ದನ್ನು ಮರೆಯುವಂತಿಲ್ಲ.
ಮುಖ್ಯಮಂತ್ರಿ ಮಾಧ್ಯಮ ಸಂಯೋಜಕರಾಗಿ ನೇಮಕಗೊಂಡ ಸಂದರ್ಭದಲ್ಲಿ ಅವರನ್ನು ಬೆಂಗಳೂರು ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಸನ್ಮಾನಿಸಲಾಗಿತ್ತು. ಆಗ ಅವರು ಅಭಿಮಾನದಿಂದ ಕೆಯುಡಬ್ಲ್ಯೂಜೆ ಮಾತನಾಡಿದ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸುತ್ತಲೇ ಇವೆ.
ಸುದ್ದಿ ಮನೆಯಲ್ಲಿ ಎಲ್ಲರ ಜೊತೆಗೂ ಸ್ನೇಹಮಯಿ ಆಗಿದ್ದಅಪರೂಪ ವ್ಯಕ್ತಿತ್ವದ ಗುರುಲಿಂಗ ಸ್ವಾಮಿ ಅವರ ನಿಧನ ಮಾಧ್ಯಮ ಲೋಕಕ್ಕೆ ಆದ ನಷ್ಟ. ಇಷ್ಟು ಬೇಗ ಅವರು ನಮ್ಮನ್ನಗಲಿ ಹೋಗುವರು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಗುರುಲಿಂಗ ಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕಂಬನಿ ಮಿಡಿದಿದ್ದಾರೆ.
Key words: KUWJ-condoles -death – Gurulinga Swamy- CM -media -coordinator