ಬೆಂಗಳೂರು ಮಾರ್ಚ್,22,2025 (www.justkannada.in): ಹೆಣ್ಣಿನ ಬಗ್ಗೆ ಬಳಕೆ ಆಗುವ ಭಾಷೆ ಗಂಡಾಳಿಕೆಯ ಮನಸ್ಥಿತಿಯದ್ದೇ ಆಗಿದೆ. ಪ್ರೀತಿ ಮಾತಿನಿಂದ ತುಟಿ ಹೊಲಿಯುವ ಸಂಚು, ಮರ್ಯಾದೆಗೇಡು ಹತ್ಯೆಗಳಲ್ಲಿ ಕಾಣುವ ದ್ವೇಷ ಕೂಡ ಗಂಡಾಳಿಕೆಯ ಭಾಷೆಯೇ ಆಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ, “ಭಾಷೆ: ಸಾಧ್ಯತೆ ಮತ್ತು ಸವಾಲುಗಳು” ಕುರಿತ ಗೋಷ್ಠಿಯಲ್ಲಿ ಆಶಯ ಮಾತುಗಳನ್ನು ಆಡಿದರು.
ನಾನು ಸಾಹಿತಿ ಅಲ್ಲ. ಸಾಹಿತ್ಯದ ಓದುಗ ಅಷ್ಟೆ. ನಾನು ಒಬ್ಬ ಪತ್ರಕರ್ತನಾಗಿ ತಿಳಿದಿದ್ದನ್ನು, ಗ್ರಹಿಸಿದ್ದನ್ನು ಮಾತ್ರ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ನನ್ನ ಗ್ರಹಿಕೆಯನ್ನು ವಿಸ್ತರಿಸಿಕೊಳ್ಳುವುದಕ್ಕೂ, ತಿದ್ದಿಕೊಳ್ಳುವುದಕ್ಕೂ ಈ ಒಂದು ಗೋಷ್ಠಿ ನನಗೆ ಉಪಯುಕ್ತ ಆಗುತ್ತದೆ ಎಂದು ನಂಬಿಕೊಂಡಿದ್ದೇನೆ ಎಂದರು.
ಅಮ್ಮ, ಅಕ್ಕ, ಪತ್ನಿ, ಅಜ್ಜಿ ಪದಗಳಿಲ್ಲದ ಬಯ್ಗುಳಗಳೇ ಇಲ್ಲದ ದ್ವೇಷದ ಭಾಷೆ ಒಂದು ಕಡೆಗಿದೆ. ಹೆಣ್ಣನ್ನು ದೇವತೆ, ಗೋಮಾತೆ ಎಂದು ಕರೆಯುತ್ತಲೇ ಪ್ರೀತಿಯ ಮಾತಿನಿಂದಲೇ ಆಕೆಯ ತುಟಿಗಳನ್ನು ಹೊಲಿಯುವ ಭಾಷೆಯೂ ಮತ್ತೊಂದು ಕಡೆಗಿದೆ. ಈ ಎರಡೂ ಸಂಚನ್ನು ದಾಟುವ ಸವಾಲು ನಮ್ಮ ಮುಂದಿದೆ. ಈ ದಿಕ್ಕಿನಲ್ಲಿ ಗೋಷ್ಠಿ ಬೆಳಕು ಚೆಲ್ಲಬಹುದು ಎಂದು ನಿರೀಕ್ಷಿಸುತ್ತೇನೆ.
ಒಂಬತ್ತು ತಿಂಗಳ ಬಾಹ್ಯಾಕಾಶ ಗರ್ಭದಿಂದ ಭೂಮಿಗೆ ಸೇಫ್ ಡೆಲಿವರಿ ಆಗಿರುವ ಸುನಿತಾ ವಿಲಿಯಮ್ಸ್ ಒಂದು ಮಾತು ಹೇಳಿದ್ದಾರೆ. “ನಾವು ಮೇಲಕ್ಕೆ ಮೇಲಕ್ಕೆ ಹೋದಷ್ಟೂ ಮನುಷ್ಯ ನಿರ್ಮಿತ ದೇಶದ ಗಡಿಗಳು ಕಾಣೆ ಆಗುತ್ತವೆ. ಕೆಳಕ್ಕೆ ಇಳಿದಾಗಲಷ್ಟೆ ಈ ಗಡಿಗಳೆಲ್ಲಾ ಕಾಣುತ್ತವೆ” ಎಂದಿದ್ದಾರೆ. ಒಂದು ಕಡೆ ಬಾಹ್ಯಾಕಾಶದಲ್ಲಿ ಬದುಕು ನಡೆಸಿ ಬಂದ ಸುನಿತಾ ವಿಲಿಯಮ್ಸ್ ಇದ್ದರೆ. ಮತ್ತೊಂದು ಕಡೆ ಕುಂಭಮೇಳದ ನದಿಯಲ್ಲಿ ಮುಳುಗೆದ್ದ ಸಮಾಜ ಇದೆ. ಇದು ಮಹಿಳಾ ಸಮಾಜದ ಮುಂದೆ ಇರುವ ಸಾಧ್ಯತೆ ಮತ್ತು ಸವಾಲು ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ ಎಂದು ಕೆ.ವಿ ಪ್ರಭಾಕರ್ ತಿಳಿಸಿದರು.
ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳಲ್ಲಿ ಇತ್ತೀಚಿಗೆ ಮೂರು ರೀತಿಯ ಘಟನೆಗಳು ಪತ್ರಿಕೆಗಳಲ್ಲಿ ಹೆಚ್ಚೆಚ್ಚು ವರದಿ ಆಗುತ್ತಿವೆ. ಅವುಗಳಲ್ಲಿ…
1.ಜಾತಿ ಕಾರಣಕ್ಕೆ ಪೋಷಕರಿಂದಲೇ ನಡೆಯುತ್ತಿರುವ ಮರ್ಯಾದೆಗೇಡು ಹತ್ಯೆಗಳು.
2.ಜಾತಿ-ಧರ್ಮ ಮೀರಿ ಪ್ರೀತಿಯ ಅಂಗಳದಲ್ಲಿ ಒಂದಾದ ಲಿವಿಂಗ್ ರಿಲೇಷನ್ ಶಿಪ್‌ನಲ್ಲಿ ನಡೆಯುತ್ತಿರುವ ಕೊಲೆಗಳು.
- ಬಾಲಕಿಯರಿಂದ-ವೃದ್ದೆಯರ ಮೇಲೂ ನಡೆಯುತ್ತಿರುವ ಸಾಮೂಹಿಕ ಅತ್ಯಾಚಾರಗಳು.
ನಮ್ಮದು ಕೇವಲ ಅಸಮಾನತೆ ಇರುವ ಸಮಾಜ ಮಾತ್ರವಲ್ಲ. ಜಾತಿ ವಿಷಮಾನತೆ ಆಚರಿಸುವ ಸಮಾಜ ಕೂಡ ಆಗಿದೆ ಎಂದರು.
ಮರ್ಯಾದೆಗೇಡು ಹತ್ಯೆಗಳಲ್ಲಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಜಾತಿ ಸಮುದಾಯಗಳ ಹೆಣ್ಣುಮಕ್ಕಳೇ ಹೆಚ್ಚಾಗಿದ್ದರೆ, ಜಾತಿ-ಧರ್ಮದ ಮಿತಿಯನ್ನು ದಾಟಿ ಲಿವಿಂಗ್ ರಿಲೇಷನ್ ಶಿಪ್‌ನಲ್ಲಿದ್ದು ಆಗುತ್ತಿರುವ ಕೊಲೆಗಳಲ್ಲಿ ಎಲ್ಲಾ ಜಾತಿ, ವರ್ಗದ ಹೆಣ್ಣುಮಕ್ಕಳು ಇದ್ದಾರೆ ಎನ್ನುವುದನ್ನು ನಾನು ಗಮನಿಸಿದ್ದೇನೆ ಎಂದು ವಿಶ್ಲೇಷಿಸಿದರು.
ಹಾಗೆಯೇ ಇತ್ತೀಚಿಗೆ ಅತ್ಯಾಚಾರಗಳಲ್ಲಿ ಸಾಮೂಹಿಕ ಅತ್ಯಾಚಾರಗಳ ಸುದ್ದಿ ಹೆಚ್ಚೆಚ್ಚು ಮಾಧ್ಯಮಗಳಲ್ಲಿ ಕಾಣಿಸುತ್ತಿವೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಇಂಥಾ ಘಟನೆಗಳನ್ನು ವರದಿ ಮಾಡುವಾಗ ಬಳಕೆ ಆಗುವ ಭಾಷೆ ಎಷ್ಟು ಅಪಾಯಕಾರಿಯಾಗಿರುತ್ತದೆ ಎನ್ನುವುದು.
ಒಂಟಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ರಾತ್ರಿ ಹನ್ನೊಂದು ಗಂಟೆಗೆ ಒಬ್ಬಳೇ ಹೋಗುತ್ತಿದ್ದ ಯುವತಿ ಮೇಲೆ ಅತ್ಯಾಚಾರ, ಪಾರ್ಕ್‌ನಲ್ಲಿ ವೃದ್ದೆಯ ಮೇಲೆ ಸಾಮೂಹಿಕ ಅತ್ಯಾಚಾರ, ಅಂಗಡಿಗೆ ಚಾಕೊಲೇಟ್ ತರಲು ಹೋಗಿದ್ದ ಬಾಲಕಿಯ ಮೇಲೆ ಅತ್ಯಾಚಾರ, ದೇವಸ್ಥಾನಕ್ಕೆ ಹೂ ತೆಗೆದುಕೊಂಡು ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರ. ಹೀಗೆ ಒಂಟಿಯಾಗಿದ್ದ, ರಾತ್ರಿ ವೇಳೆ, ಪಾರ್ಕ್ ನಲ್ಲಿ ಎನ್ನುವ ಪದಗಳೇ ಮೊದಲು ಬಳಕೆ ಆಗುತ್ತವೆ. ಆರೋಪಿಗಳ ಹೆಸರು ಸುದ್ದಿಯ ಕೊನೆಯಲ್ಲಿ ಇರುತ್ತವೆ.
ಅಂದರೆ ಇಲ್ಲಿ ಅತ್ಯಾಚಾರದ ಭೀಕರತೆಗಿಂತ ದೌರ್ಜನ್ಯಕ್ಕೆ ಒಳಗಾದವರು ಒಂಟಿಯಾಗಿದ್ದರು, ರಾತ್ರಿ ಹೊತ್ತು ಒಬ್ಬರೇ ಹೋಗುತ್ತಿದ್ದರು, ಪಾರ್ಕ್‌ನಲ್ಲಿ ಒಬ್ಬರೇ ವಾಕ್ ಮಾಡುತ್ತಿದ್ದರು, ಅವರ ಉಡುಪು ಪ್ರಚೋದನಕಾರಿಯಾಗಿತ್ತು ಎನ್ನುವ ಭಾಷೆಯೇ ಮೊದಲಿಗೆ ಬಳಕೆ ಆಗುತ್ತದೆ . ಆ ಮೂಲಕ ಮಹಿಳೆ ಒಬ್ಬೊಬ್ಬರೇ ಓಡಾಡಬಾರದು ಎನ್ನುವ ಗಂಡಾಳಿಕೆಯ ನಿರ್ಬಂಧ ಮತ್ತು ಮನಸ್ಥಿತಿ ಇಲ್ಲಿ ವ್ಯಕ್ತ ಆಗುತ್ತದೆ ಎಂದು ಕೆವಿ ಪ್ರಭಾಕರ್ ಹೇಳಿದರು.
ಹಾಗೆಯೇ ಸದನಗಳಲ್ಲಿ ಮಹಿಳಾ ಸದಸ್ಯರ ಬಗ್ಗೆ ಬಳಕೆ ಆಗುವ ಭಾಷೆ, ಈ ಬಗ್ಗೆ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಯಲ್ಲಿ ಬಳಕೆ ಆಗುವ ಭಾಷೆ, ನ್ಯಾಯಾಲಯಗಳಲ್ಲಿ ಅತ್ಯಾಚಾರ ಪ್ರಕರಣಗಳ ವಿಚಾರಣೆ ವೇಳೆ ಬಳಕೆ ಆಗುವ ಅಸೂಕ್ಷ್ಮ ಮಾತುಗಳನ್ನೆಲ್ಲಾ ನಾನು ಪತ್ರಕರ್ತ ಆಗಿ ನಾನು ಗಮನಿಸಿದ್ದೇನೆ. ನೀವೆಲ್ಲರೂ ಈ ಗಂಡಾಳಿಕೆಯ ಭಾಷೆಗೆ ಪ್ರತೀ ಕ್ಷಣ ಸಾಕ್ಷಿ ಆಗುತ್ತಲೇ ಇರುತ್ತೀರಿ. ಭೂಮಿಯ ಅರ್ಧ ಭಾಗದಷ್ಟಿರುವ ಮಹಿಳೆಯರ ಹೋರಾಟ, ಚಳವಳಿ, ಪ್ರತಿರೋಧಗಳು ಆಕಾಶದ ಅರ್ಧಭಾಗವನ್ನು ಧಕ್ಕಿಸಿಕೊಳ್ಳುವ ದಿಕ್ಕಿನಲ್ಲಿ ರಭಸವಾಗಿ ನಡೆಯುತ್ತಲೇ ಇವೆ. ಈ ಚಳವಳಿಗಳ ಜೊತೆಗೆ ಪುರುಷ ಜಗತ್ತು ಸಹೃದಯತೆಯಿಂದ ಸೇರಿಕೊಂಡಾಗ, “ಆನಂದಮಯ ಈ ಜಗ ಹೃದಯ” ಎನ್ನುವ ಕುವೆಂಪು ಅವರ ಸಾಲಿನ ಬದಲಾವಣೆಗಳಿಗೆ ಕಾರಣ ಆಗಬಹುದು ಎಂದರು.
ಕೊನೆಯದಾಗಿ ಒಂದು ಮಾತು ಹೇಳುತ್ತೇನೆ. ಮನುಷ್ಯ ಕುಲಕ್ಕೆ ಸಂಕಟ ಬಂದಾಗ ಸಂಕಟದಿಂದ ಪಾರು ಮಾಡುವ ಶಕ್ತಿ ಇರುವುದು ಮಹಿಳಾ ಕುಲಕ್ಕೆ ಮಾತ್ರ. ಏಕೆಂದರೆ ಮಹಿಳೆ ಅಧ್ಯಕ್ಷೆ, ಪ್ರಧಾನಿ ಆಗಿರುವ ದೇಶಗಳು ಯುದ್ದಗಳಿಗಾಗಿ ಹಾತೊರೆಯುವುದಿಲ್ಲ. ಕೋವಿಡ್ ನಂತಹ ಭೀಕರ ಪರಿಸ್ಥಿತಿಯನ್ನು ಅತ್ಯಂತ ಆರೋಗ್ಯಕರವಾಗಿ, ಯಶಸ್ವಿಯಾಗಿ, ಪರಿಣಾಮಕಾರಿಯಾಗಿ ನಿರ್ವಹಿಸಿದ್ದು ಮಹಿಳೆಯರೇ ಅಧ್ಯಕ್ಷೆಯರಾಗಿದ್ದ ದೇಶಗಳು ಮಾತ್ರ. ನಮ್ಮ ದೇಶದ ಪ್ರಥಮ ಮಹಿಳೆ ದ್ರೌಪಧಿ ಮರ್ಮು ಅವರನ್ನು ರಾಷ್ಟ್ರʼಪತಿʼ ಅಂತಲೇ ಕರೆಯಬೇಕು. ಇದಕ್ಕೆ ಪರ್ಯಾಯ ಪದ ಇಲ್ಲ. ರೈತ ಎನ್ನುವ ಪದ ಇದೆ. ರೈತಿ ಎನ್ನುವ ಪದ ಇಲ್ಲ. ಹೆಣ್ಣಿನ ಕುರಿತಾದ ಸಮಾಜದ ಭಾಷೆಯನ್ನು ಮತ್ತು ಇದನ್ನು ಮೀರಲು ನಡೆಯುತ್ತಿರುವ ಪ್ರಯತ್ನಗಳನ್ನು ಕೇವಲ ಒಬ್ಬ ಪತ್ರಕರ್ತನಾಗಿ ಇಲ್ಲಿ ನಾನು ಉಲ್ಲೇಖಿಸಿದ್ದೇನೆ ಎಂದು ನುಡಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿರುವ ಡಾ.ಆಶಾದೇವಿ ಅವರ ನಲವತ್ತು ವರ್ಷಗಳ ಸಾಹಿತ್ಯ ಕೃಷಿಯ ಆತ್ಮವೇ “ಹೆಣ್ಣು-ದೇಹ” ಆಗಿದೆ. ಈ ಗೋಷ್ಠಿಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿರುವ ಮೂವರೂ ವಿಷಯ ತಜ್ಞರಾಗಿದ್ದಾರೆ. ಇವರೆಲ್ಲರೂ, ನೀವೆಲ್ಲರೂ ನಿಮ್ಮ ನಿಮ್ಮ ಗ್ರಹಿಕೆ ಮತ್ತು ಅನುಭವಗಳ ಮೂಲಕ ಗೋಷ್ಠಿಯನ್ನು ಅರ್ಥಪೂರ್ಣಗೊಳಿಸುತ್ತೀರಿ ಎನ್ನುವ ಭರವಸೆ ಇದೆ ಎಂದರು.
ಡಾ.ಎಂ.ಎಸ್.ಆಸಾದೇವಿ ಅಧ್ಯಕ್ಷತೆ ವಹಿಸಿದ್ದ ಗೋಷ್ಠಿಯ ಲ್ಲಿ ಡಾ.ಸುರೇಶ್ ನಾಗಲಮಡಿಕೆ, ಪ್ರೀತಿ ನಾಗರಾಜ್, ವಸುಧೇಂದ್ರ ಅವರು ವಿಷಯ ಮಂಡನೆ ಮಾಡಿದರು.
Key words: Eighth All Karnataka Women Writers’ Conference, Language, KV Prabhakar