ಬೆಂಗಳೂರು, ಡಿಸೆಂಬರ್ ,12, 2022 (www.justkannada.in): ಈ ವರ್ಷದ ಆಗಸ್ಟ್ ತಿಂಗಳಿಂದ ರಾಜ್ಯಾದ್ಯಂತ ಅನೇಕ ಅಂಗನವಾಡಿ ಕೇಂದ್ರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಮಕ್ಕಳು ಹಾಗೂ ಗರ್ಭಿಣಿಯರಿಗೆ ‘ತಾಂತ್ರಿಕ’ ಕಾರಣಗಳಿಂದಾಗಿ ಮೊಟ್ಟೆಗಳನ್ನು ಹಂಚಿಕೆ ಮಾಡುವಲ್ಲಿ ತೊಂದರೆ ಅನುಭವಿಸುತ್ತಿವೆ.
ಮಕ್ಕಳು ಹಾಗೂ ಮಹಿಳೆಯರಲ್ಲಿ ಅಪೌಷ್ಠಿಕತೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಅಂಗನವಾಡಿ ಮಕ್ಕಳಿಗೆ ವಾರದಲ್ಲಿ ಮೂರು ಮೊಟ್ಟೆಗಳು ಹಾಗೂ ಗರ್ಭಿಣಿಯರಿಗೆ ವಾರದಲ್ಲಿ ಆರು ಮೊಟ್ಟೆಗಳನ್ನು ಹಂಚಿಕೆ ಮಾಡುತ್ತಿದೆ.
ಆದರೆ ಹಣಕಾಸು ಇಲಾಖೆಯ ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ ಖಜಾನೆ-|| ವತಿಯಿಂದ ಹಣ ಬಿಡುಗಡೆಯಲ್ಲಿ ಆಗಿರುವ ತೊಂದರೆಯಿಂದಾಗಿ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಸಿಬ್ಬಂದಿಗಳೇ ತಮ್ಮ ಸ್ವಂತ ಖರ್ಚಿನಿಂದ ಮೊಟ್ಟೆಗಳ ಬಿಲ್ಲುಗಳನ್ನು ಪಾವತಿಸುತ್ತಿದ್ದಾರೆ, ಹಾಗೂ ಹಣ ಇಲ್ಲದಿರುವವರು ಫಲಾನುಭವಿಗಳಿಗೆ ಮೊಟ್ಟೆಗಳ ಹಂಚಿಕೆಯನ್ನು ನಿಲ್ಲಿಸಿದ್ದಾರೆ.
ಗದಗ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕನಿಷ್ಠ ಮೂರು ಅಂಗನವಾಡಿ ಕೇಂದ್ರಗಳಲ್ಲಿ ಹಣಕಾಸಿನ ಕೊರತೆಯಿಂದಾಗಿ ಮಕ್ಕಳಿಗೆ ಮೊಟ್ಟೆಗಳನ್ನು ಕೊಡುವುದು ಸಾಧ್ಯವಾಗುತ್ತಿಲ್ಲವಂತೆ. ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರೆಯರ ಮತ್ತು ಸಹಾಯಕಿಯರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಎಂ. ಜಯಮ್ಮ ಅವರ ಪ್ರಕಾರ ಕರ್ನಾಟಕದಲ್ಲಿರುವ ಸುಮಾರು ೬೪,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಅಂಗನವಾಡಿ ಕೇಂದ್ರಗಳ ಪೈಕಿ ಕೇವಲ ೬,೦೦೦ ದಿಂದ ೭,೦೦೦ ಕೇಂದ್ರಗಳಲ್ಲಿ ಮಾತ್ರ ಮಕ್ಕಳಿಗೆ ಮೊಟ್ಟೆಗಳನ್ನು ನೀಡಲಾಗುತ್ತಿದೆಯಂತೆ. ಉಳಿದ ಕೇಂದ್ರಗಳಲ್ಲಿ ಹಣದ ಕೊರತೆಯಿಂದಾಗಿ ಮೊಟ್ಟೆಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲವಂತೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಅವರು ತಿಳಿಸಿದಂತೆ, ಹೊಸ ಜಿಲ್ಲೆ ವಿಜಯನಗರದಲ್ಲಿ ಮಾತ್ರ ಈ ರೀತಿ ಸಮಸ್ಯೆಯಾಗಿದೆಯಂತೆ. ಒಕ್ಕೂಟದ ಖಜಾಂಚಿ ಎಂ.ಬಿ. ಶಾರದಮ್ಮ ಅವರು, “ಸರ್ಕಾರ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆಗಳನ್ನು ಸರಬರಾಜು ಮಾಡಲು ಟೆಂಡರ್ ಆಹ್ವಾನಿಸಿತ್ತು. ಆದರೆ ಯಾವುದೋ ತಾಂತ್ರಿಕ ಸಮಸ್ಯೆಯಿಂದಾಗಿ ಆ ಟೆಂಡರ್ ಅನ್ನು ರದ್ದುಪಡಿಸಲಾಯಿತು. ಇದರಿಂದಾಗಿ ಆಗಸ್ಟ್ ೨೦೨೨ರಿಂದ ಗುತ್ತಿಗೆದಾರರು ಮೊಟ್ಟೆಗಳ ಸರಬರಾಜನ್ನು ಸ್ಥಗಿತಗೊಳಿಸಿದ್ದಾರೆ,” ಎಂದು ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಿಯಾಂಗ ಎಂ. ಅವರು ಈ ಸಂಬಂಧ ಮಾತನಾಡಿ, ಅಂಗನವಾಡಿ ಕೇಂದ್ರಗಳು ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಮೊಟ್ಟೆಗಳ ಸರಬರಾಜಿನ ಸಮಸ್ಯೆಯನ್ನು ಎರಡು ತಿಂಗಳ ಹಿಂದೆಯೇ ಬಗೆಹರಿಸಲಾಗಿತ್ತು. ಆದರೆ ತಾಲ್ಲೂಕು ಮಟ್ಟದಲ್ಲಿ ಅಂಗನವಾಡಿ ಕೇಂದ್ರಗಳ ವಿಭಜನೆಯಾದ ನಂತರ, ಎಲ್ಲಾ ತಾಲ್ಲೂಕುಗಳಿಗೂ ಏಕರೂಪದ ಹಣಕಾಸು ಲಭಿಸುತ್ತಿರುವ (ಅಂಗನವಾಡಿ ಕೇಂದ್ರದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರೂ ಸಹ) ಕಾರಣದಿಂದಾಗಿ ದೊಡ್ಡ ತಾಲ್ಲೂಕುಗಳು ಸಮಸ್ಯೆಯನ್ನು ಎದುರಿಸುತ್ತಿವೆ ಎಂದರು
“ಅಂಗನವಾಡಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರಿಗೆ, ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮಕ್ಕಳಿಗೆ ಮೊಟ್ಟೆಗಳನ್ನು ಒದಗಿಸಿ, ಬಿಲ್ಲುಗಳನ್ನು ಸಲ್ಲಿಸುವಂತೆ ಸೂಚಿಸಿದ್ದೇವೆ. ಇತರೆ ಶೀರ್ಷಿಕೆಗಳ ಅಡಿ ಲಭ್ಯವಿರುವ ನಿಧಿಯನ್ನು ಉಪಯೋಗಿಸಿಕೊಂಡು ಈ ಬಿಲ್ಲುಗಳನ್ನು ಪಾವತಿಸುವಂತೆ ಮಕ್ಕಳ ಅಭಿವೃದ್ಧಿ ಯೊಜನಾ ಅಧಿಕಾರಿಗಳಿಗೆ ಸೂಚಿಸಲಾಗಿದೆ,” ಎಂದು ಅರುಂಧತಿ ಮಾಹಿತಿ ನೀಡಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Lack –money- distribution -eggs – Anganwadi -children