ಮೈಸೂರು,ಏಪ್ರಿಲ್,22,2021(www.justkannada.in): ನ್ಯಾಯಾಲಯದ ಆದೇಶದಂತೆ ನಾಲ್ವರು ನಿವೃತ್ತ ಯೋಧರಿಗೆ ಭೂಮಿ ಮಂಜೂರು ಮಾಡಲಾಗಿದೆ ಎಂದು ಹೈಕೋರ್ಟ್ ಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರಮಾಣಪತ್ರ ಸಲ್ಲಿಕೆ ಮಾಡಿದ್ದಾರೆ.
ಹೈಕೋರ್ಟ್ ಆದೇಶದ ಬಳಿಕವೂ ತಮಗೆ ಜಮೀನು ಮಂಜೂರು ಮಾಡಿಲ್ಲ ವೆಂದು ಮೈಸೂರಿನ ನಿವೃತ್ತ ಯೋಧರಾದ ಕೆ.ಬಿ.ನಾಣಯ್ಯ, ಬಿ.ಎನ್. ಶಿವಲಿಂಗಪ್ಪ, ಕೆ.ಬಿ.ಭೀಮಯ್ಯ ಮತ್ತು ಇಕ್ಬಾಲ್ ಹುಸೈನ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ಮಧ್ಯೆ ಮೈಸೂರು ಡಿಸಿ ಪರವಾಗಿ ಸರಕಾರಿ ವಕೀಲ ಕಿರಣ್ ಕುಮಾರ್ ಹೈಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿ ಅರ್ಜಿದಾರರಿಗೆ ನ್ಯಾಯಾಲಯದ ಆದೇಶದಂತೆ ಭೂಮಿ ಮಂಜೂರು ಮಾಡಲಾಗಿದೆ ಎಂದು ಹೇಳಿದರು. ಇದನ್ನ ದಾಖಲಿಸಿಕೊಂಡ ಹೈಕೊರ್ಟ್ ವಿಭಾಗೀಯ ಪೀಠ ವಿಚಾರಣೆಯನ್ನು ಮುಂದೂಡಿತು.
ಅರ್ಜಿದಾರರಿಗೆ ಜಮೀನು ಮಂಜೂರು ಮಾಡುವಂತೆ ಹೈಕೋರ್ಟ್ ಏಕಸದಸ್ಯ ಪೀಠ 2013ರಲ್ಲೇ ಸರಕಾರಕ್ಕೆ ನಿರ್ದೇಶಿಸಿತ್ತು. ಅದನ್ನು ಪಾಲನೆ ಮಾಡದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ, ಮಾಜಿ ಯೋಧರಿಗೆ ಜಮೀನು ನೀಡಲು ಸಾಧ್ಯವಿಲ್ಲವಾದರೆ ಆ ಕುರಿತು ಸರಕಾರ ತನ್ನ ನೀತಿ ಬದಲಿಸಲಿ. ಅದು ಬಿಟ್ಟು ಕೆಲ ಯೋಧರಿಗೆ ಜಮೀನು ಮಂಜೂರು ಮಾಡಿ, ಉಳಿದವರಿಗೆ ನೀಡದೇ ತಾರತಮ್ಯ ಮಾಡುವುದನ್ನು ಕೋರ್ಟ್ ಸಹಿಸುವುದಿಲ್ಲ ಎಂದು ಹೇಳಿತ್ತು.
ಕಳೆದ ವಿಚಾರಣೆ ವೇಳೆ ನ್ಯಾಯಪೀಠ, ಅರ್ಜಿದಾರರಿಗೆ ಭೂಮಿ ಮಂಜೂರು ಮಾಡದೆ ವಿಳಂಬ ಮಾಡಿರುವ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಅವರನ್ನ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು, ಕೂಡಲೇ ಭೂಮಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆಯನ್ನೂ ನೀಡಿತ್ತು.
Key words: Land -allotted – retired soldier-Mysore DC- affidavit – High Court.