ಮೈಸೂರು,ನವೆಂಬರ್,13,2021(www.justkannada.in): ಚಾಮುಂಡಿ ಬೆಟ್ಟದಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆ ಜಿಯೋ ಟ್ರೇಲ್ ತಂತ್ರಜ್ಞಾನದ ಮೂಲಕ ಚಾಮುಂಡಿ ಬೆಟ್ಟದಲ್ಲಿ ಭೂಕುಸಿತದ ದುರಸ್ತಿ ಕಾಮಗಾರಿ ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ತಿಳಿಸಿದರು.
ಚಾಮುಂಡಿ ಬೆಟ್ಟದ ರಸ್ತಲ್ಲಿನ ಭೂ ಕುಸಿತವಾಗಿರುವ ಸ್ಥಳಕ್ಕೆ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಪರಿಶೀಲನೆ ನಡೆಸಿದ ಸಚಿವ ಸಿ.ಸಿ ಪಾಟೀಲ್ ಅಧಿಕಾರಿಗಳು ಹಾಗೂ ತಜ್ಞರಿಂದ ಮಾಹಿತಿ ಸಂಗ್ರಹಿಸಿದರು. ಸಚಿವರಿಗೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿಟಿ ದೇವೇಗೌಡ, ಎಲ್ ನಾಗೇಂದ್ರ ಸಾಥ್ ನೀಡಿದರು.
ಸ್ಥಳ ವೀಕ್ಷಣೆ ಬಳಿಕ ಮಾತನಾಡಿದ ಸಚಿವ ಸಿಸಿ ಪಾಟೀಲ್, ಜಿಯೋ ಟ್ರೇಲ್ ತಂತ್ರಜ್ಞಾನದ ಮೂಲಕ ಚಾಮುಂಡಿ ಬೆಟ್ಟದ ದುರಸ್ತಿ ಕಾಮಗಾರಿ ಮಾಡಲಾಗುತ್ತದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಹೆಚ್ಚು ವಿವರ ನೀಡುವಂತಿಲ್ಲ. ಮಣ್ಣನ್ನು ಹೀರಿಕೊಳ್ಳುವ ಸಾಮರ್ಥ್ಯ ಮೀರಿ ತೇವಾಂಶ ಹೆಚ್ಚಾದ ಕಾರಣ ರಸ್ತೆ ಕುಸಿದಿದೆ. ತಜ್ಞರ ವರದಿಯಂತೆ ರಸ್ತೆಯನ್ನ ಆಧುನಿಕ ತಂತ್ರಜ್ಞಾನ ಬಳಸಿ ರಿಪೇರಿ ಮಾಡುತ್ತೇವೆ. ಎಲ್ಲೆಲ್ಲಿ ರಸ್ತೆ ಕುಸಿಯಬಹುದು ಎನ್ನುವುದರ ಬಗ್ಗೆ ಚಾಮುಂಡಿ ಬೆಟ್ಟದಲ್ಲಿ ಸರ್ವೆ ಮಾಡಿಸಿಲ್ಲ ಎಂದರು.
ಬಿಟ್ ಕಾಯಿನ್ ಹಗರಣ ವಿಚಾರ ಕುರಿತು ಮಾತನಾಡಿದ ಸಚಿವ ಸಿ.ಸಿ ಪಾಟೀಲ್, ಆರೋಪಿಯನ್ನು ಬಂಧಿಸಿದ್ದು ಬಿಜೆಪಿ ಸರ್ಕಾರ. ತನಿಖೆ ಹಂತದಲ್ಲೂ ಯಾವುದೇ ಲೋಪ ಆಗಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಸಿಎಂ ಈಗಾಗಲೇ ಘೋಷಿಸಿದ್ದಾರೆ. ಪ್ರಕರಣ ಹಸ್ತಾಂತರ ಸಂದರ್ಭದಲ್ಲೂ ವಿಳಂಬವಾಗಿಲ್ಲ. ಪ್ರಿಯಾಂಕ್ ಖರ್ಗೆ ನಿನ್ನೆ ಪಂಚನಾಮೆ ಸರಿಯಾಗಿ ಮಾಡಿಲ್ಲ ಅಂತ ಆರೋಪ ಮಾಡಿದ್ದರು. ಅವರಿಗೆ ಕೋರ್ಟ್ ದಂಡ ವಿಧಿಸಿದೆ. ಚುನಾವಣೆ ಹತ್ತಿರ ಬಂದಿದೆ ಅಂತ ಕಾಂಗ್ರೆಸ್ ನವರು ಏನೇನೋ ಆರೋಪ ಮಾಡಬಾರದು ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸಿ.ಸಿ ಪಾಟೀಲ್, ಪಕ್ಷ 4 ಆಧಾರ ಸ್ತಂಭಗಳ ಮೇಲೆ ನಿಂತಿದೆ. ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಪಕ್ಷಕ್ಕೆ ಗೊತ್ತಿದೆ. ಪಕ್ಷದ ವಿಚರ ಮಾತನಾಡುವಷ್ಟು ನಾನು ದೊಡ್ಡವನಲ್ಲ ಎಂದರು.
Key words: Land-collapse- repair works -Chamundi Hills -Minister -C. C. Patil.