ಭೂ ಮಾಫಿಯಾಗೆ ವೃದ್ಧ ದಂಪತಿ ಬೀದಿಪಾಲು: ಅಧಿಕಾರಿಗಳ ನಡೆಗೆ ಆಕ್ರೋಶ

ಮೈಸೂರು,ಫೆಬ್ರವರಿ,5,2025 (www.justkannada.in): ಭೂ ಮಾಫಿಯಾಗೆ ವೃದ್ಧ ದಂಪತಿ ಬೀದಿಪಾಲಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಾಡಂಚಿನ ಮಗ್ಗೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಬ್ದುಲ್ ರಜಾಕ್ ಹಾಗೂ  ರಜಿಯಾ ದಂಪತಿಗಳ ಜಮೀನು ಕಬಳಿಸುವ ಪ್ರಯತ್ನ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.  ದಂಪತಿಗಳಿಗೆ ನೋಟಿಸ್ ನೀಡದೆ ಅಧಿಕಾರಿಗಳು ಮನೆ ಒಡೆದು ಹಾಕಿದ್ದಾರೆ ಎನ್ನಲಾಗಿದ್ದು, ಅಧಿಕಾರಿಗಳು, ಸ್ಥಳೀಯ ನಾಯಕರ ನಡೆಗೆ ವೃದ್ಧ ದಂಪತಿ ಮಣ್ಣೆರಚಿ ಕಣ್ಣೀರಾಕಿ ಹಿಡಿಶಾಪ ಹಾಕಿದ್ದಾರೆ.

ಕಬಿನಿ ಹಿನ್ನೀರಿನಲ್ಲಿರುವ ಅಬ್ದುಲ್ ರಜಾಕ್ ಹಾಗೂ ರಜಿಯಾ ದಂಪತಿಗಳ ಭೂಮಿ ಕಬಳಿಸುವ ಯತ್ನ ನಡೆದಿದ್ದು ಗ್ರಾಮ ಪಂಚಾಯತ್  ಪಿಡಿಓ, ಅಧಿಕಾರಿಗಳು, ಸದಸ್ಯರು ಮನೆ ಒಡೆದು ಹಾಕಿ ಮನೆಯಲ್ಲಿರುವ ಬೆಳೆಬಾಳುವ ವಸ್ತುಗಳನ್ನು ದೋಚಿದ್ದಾರೆಂದು ವೃದ್ಧೆ ಕಣ್ಣೀರು ಹಾಕಿದ್ದಾರೆ. ಯಾರಿಗಾದರೂ ವಿಷಯ ತಿಳಿಸಿದರೆ ಜೆಸಿಬಿ ಯಂತ್ರದಲ್ಲಿ ಮನೆ ಕೆಡವಿದಂತೆ , ಭೂಮಿ ಒಳಗೆ ಹೂತು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಕಬಿನಿ ಹಿನ್ನೀರಿನಲ್ಲಿರುವ ಸರ್ವೆ ನಂ.55 ರಲ್ಲಿರುವ ರಜಾಕ್ ಅವರ ಜಮೀನಿನಲ್ಲಿ ರೆಸಾರ್ಟ್ ನಿರ್ಮಿಸಲು ಉಳ್ಳವರು  ಹುನ್ನಾರ ನಡೆಸಿದ್ದಾರೆ. ಓಣಿ ರಸ್ತೆ ನಿರ್ಮಾಣದ ಹೆಸರಿನಲ್ಲಿ ಮನೆ ಒಡೆದು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅದೇ ಜಮೀನಿನ ಮೇಲೆ ರಜಾಕ್ ಪ್ರಾಥಮಿಕ ಸಹಕಾರ ಸಂಘದಲ್ಲಿ ಲಕ್ಷಾಂತರ ರೂ ಸಾಲ ಮಾಡಿದ್ದು, ತನ್ನ ಜಮೀನಿನಲ್ಲಿ ರಾಗಿ ಸೇರಿ ಹಲವು ಬೆಳೆಗಳನ್ನ ಬೆಳೆದಿದ್ದಾರೆ. ಈ ಸಂಬಂಧ ವೃದ್ಧ ದಂಪತಿ ಅಂತರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಆದರೆ ಪೊಲೀಸ್ ಇಲಾಖೆ ಕೇವಲ ಎನ್ ಸಿ  ಆರ್ ನೀಡಿ ಕೈ ತೊಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Key words: mysore,  couple evicted,  land mafia