ಮೈಸೂರು,ಜು,15,2020(www.justkannada.in): ರಾಜ್ಯ ಸರ್ಕಾರದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ನಿರ್ಧಾರ, ಬಡವರ ಪಾಲಿಗೆ ಮರಣ ಶಾಸನವಾಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಇದನ್ನ ಗಂಭೀರವಾಗಿ ಪರಿಗಣಿಸಿ ರಾಜ್ಯವ್ಯಾಪಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಂಸದ ಧೃವನಾರಾಯಣ್ ಎಚ್ಚರಿಕೆ ನೀಡಿದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಗೆ ರಾಜ್ಯಪಾಲರ ಸಮ್ಮಿತಿ ಹಿನ್ನೆಲೆ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಯ್ದೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಂಸದ ಧ್ರುವನಾರಾಯಣ್, ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವ ಮೊದಲು ಸದನದಲ್ಲಿ ಚರ್ಚೆಯಾಗಬೇಕು. ಭೂ ಸುಧಾರಣಾ ಕಾಯ್ದೆ 63ರ ಪ್ರಕಾರ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬ 108 ಎಕರೆ ಜಮೀನು ಹೊಂದಲು ಅವಕಾಶವಿತ್ತು. ಆದರೆ ಪ್ರಸ್ತುತ ಕಾಯ್ದೆ ತಿದ್ದುಪಡಿಯಿಂದ 216 ಎಕರೆ ಜಮೀನು ಹೊಂದಬಹುದಾಗಿದೆ. ಇದರಿಂದ ಹಣವಿರುವವರು ಯಾರು ಬೇಕಾದರೂ ಕೃಷಿ ಭೂಮಿಯನ್ನು ಕೊಳ್ಳಬಹುದಾಗಿದೆ. ಆಹಾರ ಉತ್ಪಾದನೆ ಸಮಸ್ಯೆ ಆಗಿದ್ದರೆ ಅಂತಹ ಸಮಯದಲ್ಲಿ ಈ ಕಾಯ್ದೆ ಜಾರಿಗೆ ತರಬಹುದಿತ್ತು. ಆದರೆ ನಮ್ಮ ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲೇ ಆಹಾರ ದಾಸ್ತಾನಿದೆ. ಈ ಕಾಯ್ದೆ ರೈತರ, ಬಡವರ ಪಾಲಿಗೆ ಮರಣ ಶಾಸನವಾಗಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಇದನ್ನ ಗಂಭೀರವಾಗಿ ಪರಿಗಣಿಸಿ ರಾಜ್ಯವ್ಯಾಪಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸರ್ಕಾರವನ್ನು ಪ್ರಶ್ನೆ ಮಾಡುವುದೇ ತಪ್ಪಾ..?
ಇದೇ ವೇಳೆ ಸಿದ್ದರಾಮಯ್ಯ ಸೋತರೂ ಬುದ್ಧಿ ಬಂದಿಲ್ಲ ಎಂಬ ಶ್ರೀನಿವಾಸ್ ಪ್ರಸಾದ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಂಸದ ಧೃವನಾರಾಯಣ್, ಸಿದ್ದರಾಮಯ್ಯನವರ ಚಾಮುಂಡೇಶ್ವರಿ ಸೋತ ಮಾತ್ರಕ್ಕೆ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಒಂದು ಕ್ಷೇತ್ರದಲ್ಲಿ ಸೋತರೂ ಮತ್ತೊಂದು ಕ್ಷೇತ್ರದಲ್ಲಿ ಗೆದ್ದಿದ್ದಾರೆ. ರಾಜಕಾರಣದಲ್ಲಿ ಸೋಲು ಗೆಲುವು ಸಹಜ ಎಂದು ಟಾಂಗ್ ನೀಡಿದರು.
ಪ್ರಬಲ ವಿರೋಧ ಪಕ್ಷವಿದ್ದರಷ್ಟೆ ಸರ್ಕಾರದ ಹಗರಣಗಳು ಬಯಲಿಗೆ ಬರುವುದು. ಸಿದ್ದರಾಮಯ್ಯನವರು ಕೇಳುವುದರಲ್ಲಿ ಅರ್ಥವಿದೆ. ಹೀಗಾಗಿ ಸರ್ಕಾರವನ್ನು ಪ್ರಶ್ನೆ ಮಾಡುವುದೇ ತಪ್ಪಾ..? ಶ್ರೀನಿವಾಸ್ ಪ್ರಸಾದ್ ಅವರು ಹಿರಿಯರು, ಅನುಭವಿಗಳು. ಅವರಿಂದ ಈ ರೀತಿ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Key words: Land- Reform Amendment -warned – government – Former MP Dhruvnarayan- mysore