ಬೆಂಗಳೂರು,ಡಿಸೆಂಬರ್,17,2021(www.justkannada.in) ಭೂ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಭೈರತಿ ಬಸವರಾಜ್ ರಾಜೀನಾಮೆ ನೀಡುವಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ಧಿಗೋಷ್ಠಿ ನಡೆಸಿದ ಸಿದ್ಧರಾಮಯ್ಯ ಹೇಳಿದ್ದಿಷ್ಟು…
ನಿಯಮ 60 ರಡಿ ಸಾರ್ವಜನಿಕ ತುರ್ತಿನ ವಿಚಾರಗಳನ್ನು ಚರ್ಚೆ ನಡೆಸತಕ್ಕದ್ದು ಎಂದು ಸದನದ ನಿಯಮದಲ್ಲಿದೆ. ಇಂದು ನಾನು ಸದನದ ನಿಯಮದಂತೆ ಒಂದು ಗಂಟೆ ಮುಂಚಿತವಾಗಿ ಬೈರತಿ ಬಸವರಾಜ್ ಅವರು ಭಾಗಿಯಾಗಿರುವ ಭೂ ಹಗರಣದ ಬಗ್ಗೆ ನಿಯಮ 60 ರಡಿ ಚರ್ಚೆಗೆ ಅವಕಾಶ ನೀಡುವಂತೆ ಕೋರಿದ್ದೆ.
ಮಾನ್ಯ ಸಭಾಧ್ಯಕ್ಷರು ಮೊದಲು ನನಗೆ ಪ್ರಾಥಮಿಕ ಸಲ್ಲಿಕೆಗೆ ಅವಕಾಶ ನೀಡಿ, ನನ್ನ ಮಾತುಗಳು ಅವರಿಗೆ ತೃಪ್ತಿದಾಯಕವಾಗಿವೆ ಅನ್ನಿಸಿದರೆ ಚರ್ಚೆಗೆ ಅವಕಾಶ ನೀಡಬೇಕು. ಆದರೆ ಇತ್ತೀಚೆಗೆ ನಿಯಮ 60 ರಡಿ ಚರ್ಚೆ ಮಾಡದೆ ಅದನ್ನು ನಿಯಮ 69 ಕ್ಕೆ ಬದಲಾವಣೆ ಮಾಡಿಕೊಂಡು ಚರ್ಚೆಗೆ ಅವಕಾಶ ನೀಡಲಾಗುತ್ತಿದೆ.
ಅಣ್ಣಯ್ಯಪ್ಪ ಎಂಬುವರಿಂದ 21/05/2003 ರಲ್ಲಿ ಖಾಲಿ ಛಾಪಾ ಕಾಗದಕ್ಕೆ ಸಹಿ ಹಾಕಿಸಿಕೊಂಡು, ಅದೇ ದಿನ 22 ಎಕರೆ ಭೂಮಿಯನ್ನು ಕಾನೂನು ಬಾಹಿರವಾಗಿ ಖರೀದಿ ಮಾಡಲಾಗಿದೆ. ಬೈರತಿ ಬಸವರಾಜು ಅವರು ಈ ನಕಲಿ ದಾಖಲೆ ಸೃಷ್ಟಿ ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್ ಪುರಂ ಹೋಬಳಿಯ ಕಲ್ಕೆರೆಯಲ್ಲಿರುವ ಈ ಜಮೀನನ್ನು ಬೈರತಿ ಬಸವರಾಜ್ ಅವರು ನಕಲಿ ದಾಖಲೆ ಸೃಷ್ಟಿಸಿ ಖರೀದಿ ಮಾಡಿದ್ದಾರೆ. ಈ ಭೂಮಿಯ ಮೌಲ್ಯ ಕನಿಷ್ಠ 350 – 400 ಕೋಟಿ ರೂಪಾಯಿ ಇದೆ. ದೂರುದಾರರಾದ ಮಾದಪ್ಪ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲು ಮಾಡಿದರು, ನಂತರ ಪೊಲೀಸರು ಬಿ ರಿಪೋರ್ಟ್ ಹಾಕಿದರು. ಇದನ್ನು ಪ್ರಶ್ನಿಸಿ ಮಾದಪ್ಪನವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯವು ಸೆಕ್ಷನ್ 120(B), 420, 427, 465, 467, 471 ಗಳಡಿಯಲ್ಲಿ ಕ್ರಿಮಿನಲ್ ಅಪರಾಧ ಪ್ರಕರಣವೆಂದು ದಾಖಲಿಸಿಕೊಂಡು, ಸಮನ್ಸ್ ಜಾರಿಗೊಳಿಸುವಂತೆ ಆದೇಶಿಸಿದೆ. ಇವುಗಳಲ್ಲಿ ಕೆಲವು ಜಾಮೀನು ರಹಿತ ಅಪರಾಧಗಳಾಗಿವೆ ಎಂದರು.
ನಮ್ಮ ಸರ್ಕಾರದ ಅಧಿಕಾರದಲ್ಲಿ ಇದ್ದಾಗ 11/07/2016 ರಲ್ಲಿ ಡಿ.ವೈ.ಎಸ್.ಪಿ ಗಣಪತಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡಾಗ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಅವರು ಸದನದಲ್ಲಿ ನಿಯಮ 60 ರಡಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಧರಣಿ ಮಾಡಿದ್ದರು.
ಬಿಜೆಪಿಯವರ ಧರಣಿ ನಂತರ ಅಂದಿನ ಸಭಾಧ್ಯಕ್ಷರು ನಿಯಮ 69 ರಡಿ ಚರ್ಚೆಗೆ ಅವಕಾಶ ನೀಡಿದ್ದರು. ಅಂದು ನಾನು ಚರ್ಚೆಗೆ ಸಿದ್ಧನಿದ್ದೇನೆ ಎಂದು ಹೇಳಿದ್ದೆ. ಜಾರ್ಜ್ ಅವರ ವಿರುದ್ಧ ಖಾಸಗಿ ದೂರು ದಾಖಲಾಗಿತ್ತು, ನ್ಯಾಯಾಲಯ ಪ್ರಾಥಮಿಕ ತನಿಖಾ ವರದಿ ಹಾಕುವಂತೆ ಆದೇಶಿಸಿದ ಕೂಡಲೆ ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೇ ರೀತಿ ಬೈರತಿ ಬಸವರಾಜ್ ಕೂಡ ಈಗಾಗಲೇ ರಾಜೀನಾಮೆ ಕೊಡಬೇಕಿತ್ತು ಇಲ್ಲ ಸರ್ಕಾರವೇ ಅವರನ್ನು ವಜಾ ಗೊಳಿಸಬೇಕಿತ್ತು.
ಬೈರತಿ ಬಸವರಾಜ್ ಸಚಿವ ಸ್ಥಾನದಲ್ಲೇ ಮುಂದುವರೆದರೆ ದೂರುದಾರನಿಗೆ ನ್ಯಾಯ ಸಿಗಲು ಸಾಧ್ಯವೇ? ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕಿದ್ದ ಬಸವರಾಜ ಬೊಮ್ಮಾಯಿ ನಮಗೆ ನೈತಿಕತೆ ಪಾಠ ಮಾಡುತ್ತಿದ್ದಾರೆ. ತಕ್ಷಣ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ.
ಡಿ.ಕೆ ರವಿ ಹಾಗೂ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ನಮ್ಮ ಸರ್ಕಾರ ಸಿ.ಬಿ.ಐ ತನಿಖೆಗೆ ಒಪ್ಪಿಸಿತ್ತು. ಎರಡೂ ಪ್ರಕರಣದಲ್ಲಿ ಜಾರ್ಜ್ ಅವರು ನಿರಪರಾಧಿ ಎಂದು ವರದಿ ಬಂದಿದೆ. ಇಂತಹ ಪ್ರಕರಣದಲ್ಲೇ ಜಾರ್ಜ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು.
ಇಂದು ನನಗೆ ಪ್ರಾಥಮಿಕ ಪ್ರಸ್ತಾಪಕ್ಕೆ ಅವಕಾಶ ನೀಡುವ ಮೊದಲೇ ಸಭಾಧ್ಯಕ್ಷರು ನನ್ನ ನೋಟಿಸ್ ಅನ್ನು ತಿರಸ್ಕಾರ ಮಾಡಿದ್ದಾರೆ. ಮಾತನಾಡಲು ಅವಕಾಶವನ್ನೇ ಕೊಡಲ್ಲ ಅಂದರೆ ನಾವು ಸದನಕ್ಕೆ ಯಾಕೆ ಬರಬೇಕು?
ಗಣಪತಿ, ಡಿ.ಕೆ ರವಿ ಪ್ರಕರಣ ನ್ಯಾಯಾಲಯದಲ್ಲಿತ್ತು, ಆದರೂ ಸದನದಲ್ಲಿ ಚರ್ಚೆ ಮಾಡಲಾಗಿತ್ತು. ಈಗಲೂ ನಾವು ಪ್ರಕರಣದ ಮೆರಿಟ್ ಮೇಲೆ ಚರ್ಚೆ ಮಾಡಲ್ಲ. ಆದರೆ ಸಂತ್ರಸ್ತನಿಗೆ ನ್ಯಾಯ ಸಿಗಬೇಕು, ಅಪರಾಧ ಆರೋಪ ಎದುರಿಸುತ್ತಿರುವವರು ಸಚಿವ ಸ್ಥಾನದಲ್ಲಿದ್ದರೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ನಮಗಿಲ್ಲ.
ನಿಯಮ 60 ರಡಿ ಚರ್ಚೆಗೆ ಅವಕಾಶ ನೀಡಬೇಕು ಮತ್ತು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂಬುದು ನಮ್ಮ ಬೇಡಿಕೆ. ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೆ ಕೈ ಬಿಡುವ ಪ್ರಶ್ನೇಯೇ ಇಲ್ಲ. ಸಮಯಾವಕಾಶದ ಕೊರತೆ ಇದೆ ಎನಿಸಿದರೆ ಸರ್ಕಾರ ಸದನವನ್ನು ಒಂದು ತಿಂಗಳವರೆಗೆ ಮುಂದುವರೆಸಲಿ, ನಾವು ಸದನಕ್ಕೆ ಹಾಜರಾಗಲು ಸಿದ್ಧರಿದ್ದೇವೆ ಎಂದು ಸಿದ್ಧರಾಮಯ್ಯ ಹೇಳಿದರು.
Key words: Land –scam- accused-Former CM -Siddaramaiah -demands -resignation –Minister- Bhairati Basavaraj