ಮೈಸೂರು,ಸೆಪ್ಟೆಂಬರ್,19,2020(www.justkannada.in) : ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಅಂಗೀಕರಿಸದಂತೆ ಒತ್ತಾಯಿಸಿ ರೈತ ಸಂಘಗಳು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಘೇರಾವ್ ಹಾಕಿ ಆಕ್ರೋಶವ್ಯಕ್ತಪಡಿಸಿದರು.
ಶನಿವಾರ ನಗರದ ಗನ್ ಹೌಸ್ ವೃತ್ತದ ಶಂಕರಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಲ್ಲವನ್ನೂ ಖಾಸಗೀಕರಣ ಮಾಡಹೊರಟಿವೆ. ಭೂ ಸೂಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಉಳ್ಳವನಿಗೆ ಭೂಮಿ ನೀಡಲು ಹೊರಟಿದೆ. ಹಾಗಾದಾಗ ರೈತ ಎಲ್ಲಿಗೆ ಹೋಗಬೇಕು? ನಾವು ಹಲವಾರು ಬಾರಿ ಪ್ರತಿಭಟನೆಗಳನ್ನು ಹಮ್ಮಿಕೊಂಡರೂ ಕೂಡ ಸರ್ಕಾರ ನಮ್ಮ ಸಮಸ್ಯೆಯನ್ನು ಪ್ರಶ್ನಿಸಿಲ್ಲ ಎಂದು ಆರೋಪಿಸಿ ರೈತ ಸಂಘಟನೆಗಳು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಸಚಿವರಿಗೆ ಘೇರಾವ್ ಹಾಕಿದರು.
ಸೆ.26ಕ್ಕೆ ರೈತರ ಸಭೆ
ಈ ವೇಳೆ ಮಾತನಾಡಿರುವ ಸಚಿವ ಎಸ್.ಟಿ ಸೋಮಶೇಖರ್, 26ನೇ ತಾರೀಖು ರೈತರ ಸಭೆ ಮಾಡೋಣ ಅಂತ ಹೇಳಿದ್ದೇವೆ. ಅಷ್ಟರೊಳಗೆ ಅವರು ಕಪ್ಪು ಬಾವುಟ ಪ್ರದರ್ಶನ ತೋರಿಸುವ ಕೆಲಸ ಮಾಡಿದ್ದಾರೆ. ಕಪ್ಪು ಬಾವುಟ ತೋರಿಸಿ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಿದ್ದರೆ ಈಡೇರಿಸಿಕೊಳ್ಳಲಿ ಏನೂ ತೊಂದರೆ ಇಲ್ಲ ಎಂದರು.
ರಸಗೊಬ್ಬರ, ಬೀಜದ ಕೊರತೆ ಇಲ್ಲ
ರೈತರಿಗೆ ನೆರವಾಗುವ ಕೆಲಸವನ್ನು ಮಾಡುತ್ತಿದ್ದೇವೆ. ರಸಗೊಬ್ಬರದ್ದು ಎಲ್ಲೂ ಒಂದೇ ಒಂದು ದೂರು ಇಲ್ಲ, ಕೇಂದ್ರದ ರಾಸಾಯನಿಕ ಗೊಬ್ಬರಗಳ ಸಚಿವರಾದ ಸದಾನಂದ ಗೌಡರು ರೈತರಿಗೆ ಎಷ್ಟು ಬೇಕು ಅವೆಲ್ಲವನ್ನೂ ಕೊಟ್ಟಿದ್ದಾರೆ. ನಾನು ಕೂಡ ಮೈಸೂರಿಗೆ ಬಂದಾಗ ಕೃಷಿ ಸೇರಿದಂತೆ ಎಲ್ಲ ಇಲಾಖೆಗಳ ವಿಚಾರಣೆ ನಡೆಸಿದ್ದೇನೆ. ಯಾವ ಅಧಿಕಾರಿಯೂ ಕೂಡ ಒಂದೇ ಒಂದು ರಸಗೊಬ್ಬರ ಕೊರತೆ ಇದೆ ಎಂದು ಹೇಳಿಲ್ಲ. ಬೀಜದ ಕೊರತೆ ಇದೆ ಎಂದು ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಕರ್ನಾಟಕದಲ್ಲಿ ಎಲ್ಲಿಯೂ ರಸಗೊಬ್ಬರ ಕೊರತೆ ಇಲ್ಲ, ಬೀಜದ ಕೊರತೆಯೂ ಇಲ್ಲ ಎಂದು ಸಚಿವ ಸೋಮಶೇಖರ್ ತಿಳಿಸಿದರು.
key words : Land-Reform-APMC-Act-amend-Supreme-Order-
Gherav-farmers-minister