ಮೈಸೂರು,ಸೆಪ್ಟೆಂಬರ್,23,2020(www.justkannada.in) ; ಭೂ ಸುಧಾರಣೆ ಕಾಯಿದೆ ಮತ್ತು ಎಪಿಎಂಸಿ ಕಾಯಿದೆ ತಿದ್ದುಪಡಿ ಸುಗ್ರಿವಾಜ್ಞೆಗಳನ್ನು ರದ್ದುಮಾಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಜಮಾವಣೆಗೊಂಡ ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಜಿಲ್ಲಾಪ್ರಧಾನ ಕಾರ್ಯದರ್ಶಿ ಜಗದೀಶ್ ಮಾತನಾಡಿ, ದೇಶದಲ್ಲಿ ಕಳೆದ 8 ತಿಂಗಳಿನಿಂದ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದೆ. ಈಗಾಗಲೇ ಐವತ್ತು ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಯಾವುದೇ ಸಿದ್ಧತೆಯಿಲ್ಲದೇ ಏಕಪಕ್ಷೀಯವಾಗಿ ಘೋಷಿಸಿದ ಲಾಕ್ ಡೌನ್ ದೇಶದ ಬಹುಪಾಲು ಜನರ ಮೇಲೆ ಅದರಲ್ಲೂ ರೈತರು, ಕಾರ್ಮಿಕರ ಮೇಲೆ ಹೇಳತೀರದ ಸಂಕಷ್ಟಗಳನ್ನು ತಂದೊಡ್ಡಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ರೈತ ಕಾರ್ಮಿಕರ ಬದುಕು ಮೂರಾಬಟ್ಟೆ
ಕೋವಿಡ್ ಲಾಕ್ ಡೌನ್ ಮತ್ತು ಸೋಂಕಿನಿಂದ ರೈತ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. ಈ ಸಂಕಷ್ಟಕರ ಸಂದರ್ಭದಲ್ಲಿ ಬಡವರ ನೆರವಿಗೆ ಬರಬೇಕಾದ ಸರ್ಕಾರ ಶ್ರೀಮಂತರ ಆದಾಯ ಹೆಚ್ಚಿಸುವಲ್ಲಿ ನಿರತವಾಗಿದೆ. ರೈತ ಪರವಾಗಿ ಯಾವುದೇ ಆಲೋಚನೆ ಮಾಡುತ್ತಿಲ್ಲವೆಂದು ಆರೋಪಿಸಿದರು.
ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ವಿತ್ರರಿಸಿ
ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕು. ಅರ್ಜಿ ಸಲ್ಲಿಸಲು ಬಾಕಿ ಇರುವ ಅರ್ಜಿದಾರರಿಗೆ ಅವಕಾಶ ನೀಡಬೇಕು. ಪ್ರತಿಯೊಬ್ಬರಿಗೂ ಉಚಿತವಾಗಿ ಕೋವಿಡ್ ಪರೀಕ್ಷೆಗೊಳಪಡಿಸಿ, ಉಚಿತ ಔಷಧೋಪಚಾರ ನೀಡಬೇಕು ಎಂದು ಹೇಳಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಿ
ಭೂಸುಧಾರಣೆ ಕಾಯಿದೆ ಮತ್ತು ಎಪಿಎಂಸಿ ಕಾಯಿದೆಯನ್ನು ತಿದ್ದುಪಡಿ ಮಾಡುವ ಎಲ್ಲ ಸುಗ್ರೀವಾಜ್ಞೆಯನ್ನು ರದ್ದು ಮಾಡಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ವಿಸ್ತರಿಸಿ ಕೂಲಿಯನ್ನು 600ಕ್ಕೆ ಏರಿಸಿ ವರ್ಷದಲ್ಲಿ 200ದಿನಗಳ ಕೆಲಸದ ಖಾತ್ರಿಯನ್ನು ಒದಗಿಸಬೇಕು ಮತ್ತು ಅದನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಸೂರ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.
key words : Land-Reform-APMC-Act-Protest-repeal-amendment