ಮೈಸೂರು,ಜನವರಿ,3,2025 (www.justkannada.in): ನಾಳೆ ಮೈಸೂರಿನಲ್ಲಿ ದಕ್ಷಿಣ ಮತ್ತು ನೈರುತ್ಯ ಪ್ರದೇಶಗಳ ಜಂಟಿ ಪ್ರಾದೇಶಿಕ ಅಧಿಕೃತ ಭಾಷಾ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಎಂಹೆಚ್ಎ ಉಪ ನಿರ್ದೇಶಕ ಅನಿರ್ಬನ್ ಕುಮಾರ್ ಬಿಸ್ವಾಸ್, ನಾಳೆ ಶನಿವಾರ, 04 ಜನವರಿ 2025 ರಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಬೆಳಿಗ್ಗೆ 09.00 ಗಂಟೆಗೆ ಅಧಿಕೃತ ಭಾಷಾ ವಿಭಾಗದಿಂದ ‘ದಕ್ಷಿಣ ಮತ್ತು ನೈಋತ್ಯ ಪ್ರದೇಶಗಳ ಜಂಟಿ ಪ್ರಾದೇಶಿಕ ಅಧಿಕೃತ ಭಾಷಾ ಸಮ್ಮೇಳನ’ವನ್ನು ಆಯೋಜಿಸಲಾಗಿದೆ.
ನಾಳೆ ನಡೆಯುವ ಸಮ್ಮೇಳನವು ದಕ್ಷಿಣ ಮತ್ತು ನೈಋತ್ಯ ಪ್ರದೇಶಗಳ ಜಂಟಿ ಪ್ರಾದೇಶಿಕ ಅಧಿಕೃತ ಭಾಷಾ ಸಮ್ಮೇಳನವಾಗಿದೆ. ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಕೇರಳದ ಮಾಜಿ ರಾಜ್ಯಪಾಲ ಹಾಗೂ ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಆಗಮಿಸಲಿದ್ದಾರೆ.
ಈ ಸಮ್ಮೇಳನಕ್ಕೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯಾರ್ ರವರು ಆಗಮಿಸಲಿದ್ದಾರೆ. ದಕ್ಷಿಣ ಮತ್ತು ನೈಋತ್ಯ ಪ್ರದೇಶಗಳಲ್ಲಿ ನೆಲೆಗೊಂಡಿರುವ ವಿವಿಧ ಬ್ಯಾಂಕುಗಳು/ ಸಂಸ್ಥೆಗಳು/ ಕಚೇರಿಗಳು ಅಧಿಕೃತ ಭಾಷೆಯ ಅನುಷ್ಠಾನಕ್ಕಾಗಿ ಮಾಡಿದ ಅತ್ಯುತ್ತಮ ಕೆಲಸಗಳಿಗಾಗಿ ವೇದಿಕೆಯಲ್ಲಿರುವ ಗಣ್ಯರಿಂದ ಪ್ರಶಸ್ತಿಯನ್ನು ಸ್ವೀಕರಿಸುವರು. ಒಟ್ಟು 32 ಪ್ರಶಸ್ತಿಗಳನ್ನು ನಾಳೆ ವಿತರಿಸಲಾಗುವುದು ಎಂದು ತಿಳಿಸಿದರು.
ಮಾಹಿತಿ ನಿರ್ವಹಣಾ ವ್ಯವಸ್ಥೆಯ ಮೂಲಕ ಪಡೆದ ತ್ರೈಮಾಸಿಕ ಪ್ರಗತಿ ವರದಿಗಳ ಆಧಾರದ ಮೇಲೆ ಈ ಪ್ರಶಸ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ. ದಕ್ಷಿಣ ಮತ್ತು ನೈಋತ್ಯ ಪ್ರದೇಶಗಳಲ್ಲಿ ಅಧಿಕೃತ ಭಾಷಾ ಕ್ಷೇತ್ರದಲ್ಲಿ ಇವರುಗಳ ಮಾಡಿದ ಅತ್ಯುತ್ತಮ ಸಾಧನೆಗಾಗಿ, ಪ್ರಶಸ್ತಿ ವಿಜೇತರಿಗೆ ಪ್ರಮಾಣಪತ್ರಗಳು ಮತ್ತು ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲಾಗುವುದು. ಈ ಸುಸಂದರ್ಭದಲ್ಲಿ, ಅಧಿಕೃತ ಭಾಷಾ ಇಲಾಖೆಯ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು ಹೆಚ್ಚಿನ ಸಂಖ್ಯೆಯ ಕೇಂದ್ರ ಸರ್ಕಾರದ ಬ್ಯಾಂಕುಗಳು/ ಸಂಸ್ಥೆಗಳು ಇತ್ಯಾದಿಗಳ ಹಿರಿಯ ಅಧಿಕಾರಿಗಳು ಹಾಜರಿರಲಿದ್ದಾರೆ ಎಂದು ತಿಳಿಸಿದರು.
key words: Southern and Southwestern Regions, Joint Regional Official Language Conference, Mysore