ನವದೆಹಲಿ:ಜುಲೈ-23:(www.justkannada.in) ಭಾರೀ ಮೊತ್ತದ ನಗದು ಠೇವಣಿ ಅಥವಾ ಹಿಂಪಡೆಯುವ ವ್ಯವಹಾರಗಳಿಗೆ ಆಧಾರ್ ದೃಢೀಕರಣ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ನಿರ್ದಿಷ್ಟಮೊತ್ತ ಮೇಲ್ಪಟ್ಟ ಆಸ್ತಿ ನೋಂದಣಿ ಹಾಗೂ ವಿದೇಶಿ ವಿನಿಮಯ ವಹಿವಾಟಿಗೂ ಈ ನಿಯಮ ಅನ್ವಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಒಂದು ನಿರ್ದಿಷ್ಟ ವಾರ್ಷಿಕ ಮಿತಿಯಲ್ಲಿ, ನಿಗದಿತ ನಗದು ಠೇವಣಿ ಅಥವಾ ಹಣ ಹಿಂಪಡೆಯಲು ಅಧಾರ್ ದೃಢೀಕರಣ ಕಡ್ಡಾಯ ಮಾಡಲು ಚಿಂತನೆ ನಡೆಸಲಾಗಿದೆ. ಈ ಮೂಲಕ ಆರ್ಥಿಕತೆಯಲ್ಲಿ ದೊಡ್ಡ ಪ್ರಮಾಣದ ಕರೆನ್ಸಿಯನ್ನು ಹತ್ತಿಕ್ಕುವ ಪ್ರಯತ್ನಗಳ ಭಾಗವಾಗಿ, ಎಲೆಕ್ಟ್ರಾನಿಕ್-ಕೆವೈಸಿ ಮೂಲಕ, ಬಯೋಮೆಟ್ರಿಕ್ ಪರಿಕರಗಳನ್ನು ಬಳಸಿ ಅಥವಾ ಒನ್ ಟೈಂ ಪಾಸ್ವರ್ಡ್ ಮೂಲಕ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಹಣಕಾಸು ಮಸೂದೆಯಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಗಳನ್ನು ಅನುಸರಿಸುವ ಈ ಕ್ರಮವು ನಿಗದಿತ ಮಿತಿಗಿಂತ ಹೆಚ್ಚಿನ ವಿದೇಶಿ ವಿನಿಮಯವನ್ನು ಖರೀದಿಸುವುದು ಸೇರಿದಂತೆ ಹಲವಾರು ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಅನ್ವಯವಾಗಲಿದೆ. ಗ್ರಾಹಕರು ಪ್ರಸ್ತುತ ತಮ್ಮ ಪ್ಯಾನ್ ಸಂಖ್ಯೆಯನ್ನು ನಮೂದಿಸಿಬೇಕಾಗುತ್ತದೆ.
ನಿರ್ದಿಷ್ಟ ಮೌಲ್ಯಕ್ಕಿಂತ ಹೆಚ್ಚಿನ ವಹಿವಾಟಿನ ಸಂದರ್ಭದ ಜತೆಗೆ ಆಸ್ತಿ ನೋಂದಣಿ ಸಮಯದಲ್ಲಿ ಕೂಡ ಆಧಾರ್ ದೃಢೀಕರಣ ಕಡ್ಡಾಯವಾಗಿ ಅನ್ವಯವಾಗುವಂತೆ ನಿಯಮ ಜಾರಿಗೆ ತರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ವಾರ್ಷಿಕ 20ರಿಂದ 25 ಲಕ್ಷ ರೂ. ಮೇಲ್ಪಟ್ಟ ನಗದು ಜಮೆ ಅಥವಾ ಹಿಂಪಡೆಯುವ ವ್ಯವಹಾರಗಳಿಗೆ ಆಧಾರ್ ದೃಢೀಕರಣ ಕಡ್ಡಾಯ ಮಾಡಲಾಗುತ್ತದೆ. ಎಲೆಕ್ಟ್ರಾನಿಕ್ ಕೆವೈಸಿ ಅಥವಾ ಒಂದು ಬಾರಿ ಮೊಬೈಲ್ಗೆ ಒಟಿಪಿ ಕಳುಹಿಸುವ ವಿಧಾನದಲ್ಲಿ ಇದನ್ನು ನಡೆಸಲಾಗುತ್ತದೆ. ಈ ಕ್ರಮದಿಂದ ಕಿರಾಣಿ ಅಂಗಡಿ ಹಾಗೂ ಡೈರಿಯಂತಹ ಸಣ್ಣ ಉದ್ಯಮ ನಡೆಸುವ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಅಂಥವರನ್ನು ಆಧಾರ್ ದೃಢೀಕರಣದಿಂದ ಹೊರಗಿಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.