ನ್ಯಾಯ ಎಲ್ಲಿದೆಯಪ್ಪ…? : ಶಿಕ್ಷಕರ ಅವೈಜ್ಞಾನಿಕ ವರ್ಗಾವಣೆ, ಅರ್ಹರಿಗೆ ಸಿಗದ ಅವಕಾಶ. ಆದ್ರೂ ವರ್ಗಾವಣೆ ಅಭಾದಿತ.

 

ಬೆಂಗಳೂರು, ಆ.09, 2019 : ಮೂರು ವರ್ಷಗಳ ಬಳಿಕ ನಡೆಯುತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಡಿ ಪ್ರಾಮಾಣಿಕರಿಗೆ ವರ್ಗಾವಣೆ ಭಾಗ್ಯ ಸಿಕ್ಕಿಲ್ಲ, ಇದೊಂದು ಅವೈಜ್ಞಾನಿಕ ಕ್ರಮ ಎಂಬ ಆಕ್ಷೇಪ ಶಿಕ್ಷಕರಿಂದಲೇ ವ್ಯಕ್ತವಾಗಿದೆ.

ಕೋರಿಕೆ ವರ್ಗಾವಣೆಯ ವ್ಯಾಪ್ತಿಯಲ್ಲಿ ಎಲ್ಲ ವಿಷಯಗಳ ಒಟ್ಟು ಶಿಕ್ಷಕರ ಸಂಖ್ಯೆಯನ್ನು ಗಮನಿಸಿದರೆ ಶೇ 4ರಷ್ಟು ಜನರಿಗೆ ಮಾತ್ರ ವರ್ಗಾವಣೆ ಸೌಲಭ್ಯ ಸಿಗಲಿದೆ. ಇದರಿಂದ 25–30 ವರ್ಷಗಳಿಂದ ಗ್ರಾಮೀಣ ಶಾಲೆಗಳಲ್ಲೇ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ನಗರ ಶಾಲೆಗಳಿಗೆ ವರ್ಗಾವಣೆಯ ಭಾಗ್ಯವೇ ಸಿಗದಂತಾಗಿದೆ ಎಂಬುದು ನೊಂದ ಶಿಕ್ಷಕರ ಅಹವಾಲು.

ಶಿಕ್ಷಕರ ಖಾಲಿ ಹುದ್ದೆಯನ್ನು ಭರ್ತಿ ಮಾಡದೆ ವರ್ಗಾವಣೆ ಮೇಲೆ ಮಿತಿ ಹೇರಿದ್ದು ತಪ್ಪು. ಖಾಲಿ ಹುದ್ದೆ ಭರ್ತಿಯಾಗುವ ತನಕವೂ ವರ್ಗಾವಣೆಗೆ ಅವಕಾಶ ಕೊಡಬೇಕು. ಕೋರಿಕೆ ವರ್ಗಾವಣೆಯಲ್ಲಿ ಪತಿ–ಪತ್ನಿ, ಅಂಗವಿಕಲರು, ಸಂಘದ ಪದಾಧಿಕಾರಿಗಳು ಸೇರಿಕೊಳ್ಳುತ್ತಾರೆ. ಶೇ 80ರಷ್ಟು ಮಂದಿ ಇವರೇ ಆಗಿರುತ್ತಾರೆ. ವರ್ಗಾವಣೆ ಮಿತಿ ಇರುವುದು ಶೇ 4ರಷ್ಟು ಮಾತ್ರ. ಅಂದರೆ ಉಳಿದ ಅರ್ಹ ಶಿಕ್ಷಕರು ವರ್ಗಾವಣೆಯಿಂದ ಕಾಯಂ ವಂಚಿತರಾಗುವುದು ನಿಶ್ಚಿತ ಎಂಬಂತಹ ಸ್ಥಿತಿ ಎದುರಾಗಿದೆ.

ಶೇ 4ರಷ್ಟು ಮಿತಿಗೊಳಪಟ್ಟು ದೈಹಿಕ ಶಿಕ್ಷಕರನ್ನು ವರ್ಗಾವಣೆ ಮಾಡಲು ಅವಕಾಶ ಇದೆ. ಇದೇ ಮಾದರಿಯನ್ನು ವಿಷಯವಾರು ವಿಂಗಡಿಸಿದರೆ ಹಲವಾರು ಮಂದಿಗೆ ಅವಕಾಶ ಸಿಕ್ಕಿರುತ್ತಿತ್ತು. ಪತಿ–ಪತ್ನಿ, ಅನಾರೋಗ್ಯ, ಸಂಘದ ಪದಾಧಿಕಾರಿಗಳಿಗೆ ಹಾಗೂ ಇತರಿಗೆ ಪ್ರತ್ಯೇಕವಾಗಿ ಶೇಕಡವಾರು ಮಿತಿ ನಿಗದಿಪಡಿಸಿದ್ದರೂ ಒಂದಿಷ್ಟು ಅನ್ಯಾಯ ಕಡಿಮೆಯಾಗಬಹುದು ಎಂಬ ಅಭಿಪ್ರಾಯ ಹಲವು ಶಿಕ್ಷಕರದು.

ಬಡ್ತಿ ಪಡೆದವರಿಗೇ ಅನುಕೂಲ:

ಈ ಸಲ ವರ್ಗಾವಣೆಗೆ ಅರ್ಹತೆ ಗಳಿಸಿದವರಲ್ಲಿ ಶೇ 60ಕ್ಕಿಂತ ಅಧಿಕ ಮಂದಿ ಪ್ರಾಥಮಿಕದಿಂದ ಪ್ರೌಢಶಾಲೆಗೆ ವರ್ಗಾವಣೆ ಪಡೆದವರು. ಬಡ್ತಿ ಹೊಂದಿದ ಮೇಲೆ ಯಾವ ಸ್ಥಳದಲ್ಲಿದ್ದರೋ ಅಲ್ಲಿಂದ ಲೆಕ್ಕಕ್ಕೆ ತೆಗೆದುಕೊಳ್ಳದೆ ಅವರು ಸೇವೆಗೆ ಸೇರಿದ ದಿನಾಂಕದಿಂದ ವರ್ಗಾವಣೆ ಮಾನದಂಡವನ್ನು ಪರಿಗಣಿಸಲಾಗಿದೆ. ಇದರಿಂದ ನೇರ ನೇಮಕಾತಿ ಹೊಂದಿದ ಶಿಕ್ಷಕರ ಅರ್ಹತಾ ಅಂಕ ಕಡಿಮೆಯಾಗುತ್ತದೆ. ಹಿಂದಿನ ವರ್ಗಾವಣೆ ದಿನಾಂಕದಿಂದ ಅವರು ಹಳ್ಳಿಯಲ್ಲಿ ಸೇವೆ ಸಲ್ಲಿಸಿದ್ದಾರೆಯೇ ಎಂಬುದನ್ನು ನೋಡಬೇಕಿತ್ತು. ಇದು ನಡೆದಿಲ್ಲ. ವರ್ಗಾವಣೆ ಪ್ರಕ್ರಿಯೆಯಲ್ಲಿ ಇದೊಂದು ದೊಡ್ಡ ಲೋಪ ಎಂದು ನೊಂದ ಹಲವು ಶಿಕ್ಷಕರು ತಿಳಿಸಿದರು.

ಸ್ಪಷ್ಟನೆ :
ಶಿಕ್ಷಕರ ವರ್ಗಾವಣೆಯಲ್ಲಿ ಸರ್ಕಾರ ರೂಪಿಸಿದ ನಿಯಮಗಳನ್ನು ಪಾಲಿಸಲಾಗಿದೆ. ಲೋಪದೋಷಗಳನ್ನು ಮುಂದಿನ ವರ್ಗಾವಣೆ ವೇಳೆ ಸರಿಪಡಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಂ.ಪಿ.ಮಾದೇಗೌಡ ಸ್ಪಷಪಡಿಸಿದ್ದಾರೆ.

 

ಕೃಪೆ : ಪ್ರಜಾವಾಣಿ

key words : large scale complaints from teachers accross karnataka, about the irregularities in the transfers