ನವದೆಹಲಿ, ಜುಲೈ 05, 2020 (www.justkannada.in): ವಿಶ್ವದಲ್ಲೇ ಅತಿದೊಡ್ಡ ಕೋವಿಡ್-ಆರೈಕೆ ಕೆಂದ್ರವೆಂದು ಹೆಸರಾದ 10 ಸಾವಿರ ಹಾಸಿಗೆಗಳ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಇಂದು ಇಲ್ಲಿನ ರಾಧಾ ಸೋಮಿ ಸತ್ಸಂಗ್ ಬಿಯಾಸ್ನಲ್ಲಿ ಉದ್ಘಾಟಿಸಿದರು.
ಸೌಮ್ಯ ಮತ್ತು ಲಕ್ಷಣರಹಿತ ಕರೊನಾವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಛತ್ತಾಪುರದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ರೋಗಲಕ್ಷಣವಿಲ್ಲದ, ಆದರೆ ಮನೆಯಲ್ಲಿ ಐಸೋಲೇಶನ್ ಸೌಲಭ್ಯ ಸಾಧ್ಯವಾಗದವರಿಗೆ ಇದು ಚಿಕಿತ್ಸಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ.
ಈ ಕೇಂದ್ರವು 1,700 ಅಡಿ ಉದ್ದ, 700 ಅಡಿ ಅಗಲ – ಅಂದಾಜು 20 ಫುಟ್ಬಾಲ್ ಮೈದಾನಗಳ ಗಾತ್ರ – ಮತ್ತು 200 ಆವರಣಗಳನ್ನು ಹೊಂದಿದ್ದು, ತಲಾ ಒಂದೊಂದು ಆವರಣದಲ್ಲಿ 50 ಹಾಸಿಗೆಗಳ ಸೌಲಭ್ಯವಿದೆ.