ಬೆಂಗಳೂರು, ಆಗಸ್ಟ್ 17, 2021 (www.justkannada.in): ಬಿಬಿಎಂಪಿಯ ಮನೆಮನೆಗೆ ತೆರಳಿ, ಬೆಂಗಳೂರು ನಿವಾಸಿಗಳ ಸಾಮಾನ್ಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸುವ ಸಮೀಕ್ಷೆಗೆ ಸೋಮವಾರ ಚಾಲನೆ ನೀಡಲಾಯಿತು.
ಕೋವಿಡ್-19 ಹರಡುವಿಕೆಯನ್ನು ಅಂದಾಜಿಸುವುದು ಈ ಸಮೀಕ್ಷೆಯ ಪ್ರಮುಖ ಉದ್ದೇಶವಾಗಿರುವುದರ ಜೊತೆಗೆ, ಹೊಸ ಸೋಂಕುಗಳೇನಾದರೂ ಇದ್ದರೆ ಅವುಗಳನ್ನು ತಿಳಿದುಕೊಳ್ಳುವುದರ ಜೊತೆಗೆ ನಾಗರಿಕರ ಆರೋಗ್ಯ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಂಡು ದತ್ತಾಂಶವನ್ನು ಸಿದ್ಧಪಡಿಸುವುದು ಈ ಸಮೀಕ್ಷೆಯ ಒಟ್ಟಾರೆ ಉದ್ದೇಶವಾಗಿದೆ.
ಈ ಸಂಬಂಧ ಮಾತನಾಡಿದ ಕಂದಾಯ ಸಚಿವರಾದ ಆರ್. ಅಶೋಕ್ ಅವರು, “ಬೆಂಗಳೂರು ಮಹಾನಗರದಲ್ಲಿರುವವರೆಲ್ಲರೂ ಸಹ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಹೋಗುವಷ್ಟು ಶಕ್ತಿಯನ್ನು ಹೊಂದಿಲ್ಲ. ಕೊಳಗೇರಿ ನಿವಾಸಿಗಳಾಗಿರಬಹುದು ಅಥವಾ ಕಟ್ಟಡ ನಿರ್ಮಾಣ ಕಾರ್ಮಿಕರಾಗಿರಬಹುದು, ನಮ್ಮ ವೈದ್ಯರು ಎಲ್ಲರನ್ನೂ ತಲುಪಲಿದ್ದಾರೆ. ಇದು ಇಡೀ ದೇಶದಲ್ಲಿ ಈ ರೀತಿಯ ಮೊಟ್ಟ ಮೊದಲ ಸಮೀಕ್ಷೆಯಾಗಿದ್ದು, ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ನೆರವಾಗಲಿದೆ,” ಎಂದು ವಿವರಿಸಿದರು.
ಆರಂಭದಲ್ಲಿ, ಈ ಕಾರ್ಯಕ್ರಮವನ್ನು 54 ವಾರ್ಡುಗಳಲ್ಲಿ ನಡೆಸಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಎರಡು ವಾರ್ಡ್ ಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ವಾರ್ಡ್ ಗೆ ವೈದ್ಯರು ಹಾಗೂ ಪ್ಯಾರಾಮೆಡಿಕ್ ಗಳು ಒಳಗೊಂಡ ಐದು ತಂಡಗಳು ತೆರಳಿ ಸಮೀಕ್ಷೆ ನಡೆಸಲಿದೆ. ಮೊದಲ ಹಂತದಲ್ಲಿ ಸಮೀಕ್ಷೆ ನಡೆಸುವವರು ಅತೀ ಹೆಚ್ಚಿನ ಪ್ರಮಾಣದ ಕೋವಿಡ್ ಪ್ರಕರಣಗಳಿರುವಂತಹ ವಾರ್ಡುಗಳ ಮೇಲೆ ಗಮನಕೇಂದ್ರೀಕರಿಸಲಿದ್ದಾರೆ. ವಾರ್ಡುಗಳನ್ನು ಆಯ್ಕೆ ಮಾಡುವಲ್ಲಿ ನಿಗಧಿಪಡಸಲಾಗಿದ್ದಂತಹ ಮತ್ತೊಂದು ಮಾನದಂಡವೇನೆಂದರೆ ವಾಸ್ತವ ಕಾರ್ಯಸಾಧ್ಯತೆ, ಎನ್ನುತ್ತಾರೆ ಬಿಬಿಎಂಪಿ ವಿಶೇಷ ಆಯುಕ್ತರಾದ (ಆರೋಗ್ಯ) ರಣದೀಪ್ ಡಿ.
ಕಾಗದರಹಿತ ಮಾದರಿ
ಈ ಸಮೀಕ್ಷೆ ಸಂಪೂರ್ಣವಾಗಿ ಕಾಗದರಹಿತವಾಗಿರುತ್ತದೆ. ಪ್ರತಿ ತಂಡಕ್ಕೂ ಟ್ಯಾಬ್ ನೀಡಲಾಗಿದ್ದು, ಕಸ್ಟಂ ನಿರ್ಮಿತ ಆ್ಯಪ್ ಮೂಲಕ ಮಾಹಿತಿಯನ್ನು ಸಂಗ್ರಹಿಸಿ ಅಪ್‌ಲೋಡ್ ಮಾಡಲಾಗುತ್ತದೆ. ಸಂದರ್ಶಕರಿಗೆ ಕೋವಿಡ್ ಲಸಿಕಾಕರಣದ ಕುರಿತು ಹಾಗೂ ಸಹಖಾಯಿಲೆಗಳ ಕುರಿತು ವಿವರವಾದ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಈ ಸಮೀಕ್ಷೆ ನಡೆಸಲು ಹಾಲಿ ವೈದ್ಯಕೀಯ ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿಗಳನ್ನು ನಿಯೋಜಿಸುವುದರ ಜೊತೆಗೆ ಬಿಬಿಎಂಪಿ ಕೆಲವು ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದ ಮೇಲೂ ಪಡೆದುಕೊಂಡಿದೆ. ಈ ಸಮೀಕ್ಷೆಗೆ ತಗಲುವ ವೆಚ್ಚದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎನ್ನುವುದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯ.
“ಈ ಸಮೀಕ್ಷೆಯ ಒಂದು ಭಾಗಕ್ಕೆ ತಗಲುವ ವೆಚ್ಚಗಳನ್ನು ರಾಜ್ಯ ಸರ್ಕಾರದ ಕೋವಿಡ್ ಅನುದಾನದಿಂದ ಭರಿಸಬಹುದು ಎಂಬ ವಿಶ್ವಾಸವಿದೆ,” ಎನ್ನುತ್ತಾರೆ ಆ ಅಧಿಕಾರಿ.
ಪ್ರತಿ ತಂಡಕ್ಕೆ ಒಂದು ದಿನದಲ್ಲಿ ೫೦ ಮನೆಗಳಿಗೆ ಭೇಟಿ ನೀಡುವ ಗುರಿ ನೀಡಲಾಗಿದೆ ಹಾಗೂ ಒಂದು ತಿಂಗಳ ಒಳಗಾಗಿ ಎಲ್ಲಾ ಮನೆಗಳನ್ನು ತಲುಪುವ ಗುರಿಯನ್ನು ಬಿಬಿಎಂಪಿ ಹೊಂದಿದೆಯಂತೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words launches – first –family-health- inspection -survey – Bangalore