ಬೆಂಗಳೂರು, ಜನವರಿ 31, 2022 (www.justkannada.in): ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಎರಡು ವರ್ಷಗಳ ಹಿಂದೆ ಚೀನಾದ ಕಂಪನಿಯೊಂದಕ್ಕೆ ನಮ್ಮ ಮೆಟ್ರೊ ರೈಲಿನ ೨೧೬ ಕೋಚ್ಗಳ್ನು ನಿರ್ಮಾಣ ಮಾಡುವ ಗುತ್ತಿಗೆಯೊಂದನ್ನು ನೀಡಿ, ಈ ಸಂಬಂಧ ಒಂದು ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ನಿಯಮಗಳ ಪ್ರಕಾರ ಚೀನಾದ ಕಂಪನಿ ಕೋಚ್ ಗಳನ್ನು ಜೋಡಿಸುವ, ಪರಿಶೀಲಿಸುವ ಹಾಗೂ ಅನುಷ್ಠಾನಗೊಳಿಸುವುದಕ್ಕೆ ಸ್ಥಳೀಯ ಪಾಲುದಾರರನ್ನು ಹುಡುಕುವಲ್ಲಿ ಹೆಣಗಾಡುತ್ತಿದ್ದ ಈ ಕಾರಣದಿಂದಾಗಿ ಗುತ್ತಿಗೆ ಮುರಿದುಬೀಳುವ ಅಪಾಯ ಎದುರಾಗಿದೆ.
ಚೀನಾದ ಸಿಆರ್ಆರ್ಸಿಸಿ ಕಾರ್ಪೊರೇಷನ್ ಲಿ.ನ ಅಂಗಸಂಸ್ಥೆ ಸಿಆರ್ಸಿಸಿ ನಾನ್ ಜಿಂಗ್ ಪುಝೆ಼ನ್ ಕಂಪನಿ ಲಿ, ಡಿಸೆಂಬರ್ ೨೦೧೯ರಲ್ಲಿ ರೂ.೧,೫೭೮ ಕೋಟಿ ವೆಚ್ಚದಲ್ಲಿ ೨೧೬ ಮೆಟ್ರೊ ಕೋಚ್ಗಳನ್ನು ನಿರ್ಮಾಣ ಮಾಡಿಕೊಡುವ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಆದರೆ ಒಪ್ಪಂದದ ಪ್ರಕಾರ ನಮ್ಮ ಮೆಟ್ರೊ ನಿಗಧಿಪಡಿಸಿದ್ದ ಸೂಚನೆಗಳಂತೆ ಕೆಲಸ ಮಾಡುವಲ್ಲಿ ವಿಫಲವಾಗಿದೆ.
ಬಿಎಂಆರ್ಸಿಎಲ್ ಈ ಸಂಬಂಧ ಚೀನಾದ ಕಂಪನಿಗೆ ಹಲವು ನೋಟಿಸ್ ಗಳನ್ನು ನೀಡಿದ್ದು, ಗುತ್ತಿಗೆಯ ಪ್ರಕಾರ ರೂ.೩೭೨ ಕೋಟಿ ಬ್ಯಾಂಕ್ ಗ್ಯಾರಂಟಿಯನ್ನು ನಗದುಗೊಳಿಸಿಕೊಳ್ಳುವುದಾಗಿ ತಿಳಿಸಿದೆ. ಆದರೆ ಗುತ್ತಿಗೆ ಇನ್ನೂ ಜೀವಂತವಾಗಿದೆ.
ಈ ಹಿನ್ನೆಲೆಯಲ್ಲಿ ಸಿಆರ್ಸಿಸಿ, ಬ್ಯಾಂಕ್ ಗ್ಯಾರಂಟಿಯನ್ನ ಎನ್ ಕ್ಯಾಶ್ ಮಾಡಿಕೊಳ್ಳುವ ಬಿಎಂಆರ್ಸಿಎಲ್ ನ ನಿರ್ಧಾರವನ್ನು ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿ ಮೊರೆ ಹೋಗಿದೆ. ನ್ಯಾಯಾಲಯ ಈ ಪ್ರಕರಣವನ್ನು ಫೆಬ್ರವರಿಯಲ್ಲಿ ವಿಚಾರಣೆಗೆ ದಿನಾಂಕ ನಿಗಧಿಪಡಿಸಿದೆ. ಕೋಚ್ ಗಳನ್ನು ನಿರ್ಮಾಣ ಮಾಡುವ ಸಂಬಂಧ ಎರಡನೆ ಅತೀ ಕಡಿಮೆ ಬಿಡ್ ನಮೂದಿಸಿದ್ದ ಮೊತ್ತಕ್ಕಿಂತ ಸುಮಾರು ರೂ.೨೦೦ ಕೋಟಿ ಕಡಿಮೆ ವೆಚ್ಚದಲ್ಲಿ ಕೋಚ್ಗಳನ್ನು ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿದ್ದರಿಂದ ಚೀನಾದ ಕಂಪನಿ ಈ ಗುತ್ತಿಗೆಯನ್ನು ಗೆದ್ದುಕೊಂಡಿತ್ತು.
ಟೆಂಡರ್ನ ನಿಯಮಗಳ ಪ್ರಕಾರ ಚೀನಾದ ಸಂಸ್ಥೆ, ‘ಮೇಕ್-ಇನ್-ಇಂಡಿಯಾ’ ನೀತಿಯಡಿ ೯೪%ರಷ್ಟು ಕೋಚ್ಗಳನ್ನು ನಿರ್ಮಾಣ ಮಾಡಬೇಕಿತ್ತು. ಆದರೆ ಸಿಆರ್ಸಿಸಿ ಕಾರ್ಯನಿರ್ವಾಹಕರು ಈವರೆಗೂ ಕೋಚ್ಗಳನ್ನು ಜೋಡಿಸುವ, ಪರಿಶೀಲಿಸುವ ಹಾಗೂ ನಿಯೋಜಿಸುವ ಸಂಬಂಧ ಯಾವುದೇ ಸ್ಥಳೀಯ ತಯಾರಕರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗಿದೆ.
ಎಫ್ಡಿಐ ನೀತಿಯಲ್ಲಿ ಬದಲಾವಣೆ
ಕಂಪನಿಯು ಈ ವರ್ಷ ಜೂನ್ ತಿಂಗಳಿಂದ ಕೋಚ್ಗಳನ್ನು ಹಸ್ತಾಂತರಿಸಬೇಕಿತ್ತು. ಆದರೆ ವಿದೇಶ ನೇರ ಹೂಡಿಕೆ (ಎಫ್ಡಿಐ) ನೀತಿಯಲ್ಲಿ ಮಾಡಿರುವ ಬದಲಾವಣೆಯು ನಿಗಧಿತ ಸಮಾಯವಧಿಯನ್ನು ಹಳಿ ತಪ್ಪಿಸಿದೆ. ಹಾಗಾಗಿ ಚೀನಾದ ಕಂಪನಿಯು ಗುತ್ತಿಗೆಯಲ್ಲಿ ತಿಳಿಸಿರುವಂತೆ ಎಲ್ಲಾ ೨೧೬ ಕೋಚ್ ಗಳನ್ನೂ ಸಹ ಚೀನಾದಲ್ಲೇ ತಯಾರಿಸಿ ನೀಡುವುದಾಗಿ ತಿಳಿಸಿ ಅನುಮತಿ ಕೋರಿ ಬಿಎಂಆರ್ಸಿಎಲ್ ಗೆ ಮೊರೆ ಹೋಗಿತ್ತು. ಆದರೆ ಬಿಎಂಆರ್ಸಿಎಲ್ ಈ ಮನವಿಯನ್ನು ತಿರಸ್ಕರಿಸಿದೆ.
“ಟೆಂಡರ್ನ ನಿಯಮದ ಪ್ರಕಾರ ಸ್ಥಳೀಯ ತಯಾರಕರ ಜೊತೆ ಚೀನಾದ ಕಂಪನಿ ಒಪ್ಪಂದವನ್ನು ಮಾಡಿಕೊಳ್ಳಬಹುದು. ಆದರೆ ಕಂಪನಿ ಹೆಚ್ಚಿನ ಸಮಯಾವಕಾಶವನ್ನು ಕೋರಿದೆ. ನಾವು ಇನ್ನೂ ಸ್ವಲ್ಪ ಸಮಯದವರೆಗೂ ಕಾದು ನೋಡುತ್ತೇವೆ. ಒಂದು ವೇಳೆ ಅವರು ಸರಿಯಾಗಿ ಸ್ಪಂದಿಸದೇ ಇದ್ದರೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ,” ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು ತಿಳಿಸಿದ್ದಾರೆ. ಜೊತೆಗೆ, ಗುತ್ತಿಗೆಯನ್ನು ವಜಾಗೊಳಿಸುವ ಯಾವುದೇ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ ಎಂದೂ ತಿಳಿಸಿದ್ದಾರೆ. ಈ ಮೆಟ್ರೊ ಕೋಚ್ಗಳಿಗೆ ಸಿಬಿಟಿಸಿ ಸಿಗ್ನಲಿಂಗ್ ವ್ಯವಸ್ಥೆ ಹಾಗೂ ಚಾಲಕರಹಿತ ಕಾರ್ಯಾಚರಣೆಗಳ ವ್ಯವಸ್ಥೆಗಳನ್ನು ಅಳವಡಿಸಬೇಕಿದೆ.
ಬಿಎಂಆರ್ಸಿಎಲ್ ಈ ಪೈಕಿ ೧೨೧ ಹೊಸ ಕೋಚ್ಗಳನ್ನು ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಹಾಗೂ ಉಳೀದ ೯೫ ಕೋಚ್ಗಳನ್ನು, ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಆರ್ವಿ ರಸ್ತೆ ಹಾಗೂ ಬೊಮ್ಮಸಂದ್ರದ ನಡುವಿನ ರೀಚ್ ೫ಕ್ಕೆ ಬಳಸಿಕೊಳ್ಳಲಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: lease – Chinese company – our metro- train -coaches