ಮೈಸೂರು ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಚಿರತೆ ಸೆರೆ ಕಾರ್ಯಾಚರಣೆ: ಸಚಿವ ಈಶ್ವರ ಖಂಡ್ರೆ

ಬೀದರ್, ಡಿಸೆಂಬರ್,31,2024 (www.justkannada.in):  ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಇಂದು ಮುಂಜಾನೆ ಚಿರತೆ ಚಿರತೆ ಕಾಣಿಸಿಕೊಂಡಿದ್ದು,  ಚಿರತೆ ಸೆರೆಗೆ ಅರಣ್ಯಾಧಿಕಾರಿಗಳಿಂದ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಈಶ್ವರ್ ಖಂಡ್ರೆ,  ಸಿಸಿ ಟಿವಿಯಲ್ಲಿ ಚಿರತೆ  ಚಲನವಲನದ ದೃಶ್ಯಗಳು ಸೆರೆಯಾಗಿದ್ದು, ತುರ್ತು ಕಾರ್ಯಾಚರಣೆಗೆ ಸೂಚನೆ ನೀಡಲಾಗಿದೆ. ಚಿರತೆ ಸೆರೆ ಹಿಡಿಯಲು ಚಿರತೆ ಕಾರ್ಯಪಡೆ ತಂಡವನ್ನು ಕಳುಹಿಸಲಾಗಿದ್ದು,  ತಂಡದಲ್ಲಿ ಪಶುವೈದ್ಯರು, ಚಿರತೆ ಸೆರೆ ತರಬೇತಿ ಪಡೆದ 40 ಸಿಬ್ಬಂದಿ ಇದ್ದಾರೆ. ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳೂ ಸ್ಥಳದಲ್ಲಿದ್ದು, ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದು ಆತಂಕ ಪಡುವ ಅಗತ್ಯವಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಬಲೆ, ಅರವಳಿಕೆ ಔಷಧದೊಂದಿಗೆ ಸಜ್ಜಾಗಿದ್ದಾರೆ. ಚಿರತೆ ಪತ್ತೆಗೆ ಥರ್ಮಲ್ ಕ್ಯಾಮರಾ ಅಳವಡಿಸಿದ ಡ್ರೋನ್ ಸಹ ಬಳಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಶೀಘ್ರವೇ ಚಿರತೆ ಸೆರೆ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

Key words: Leopard,  operation, Mysore Infosys, campus, Minister, Eshwar Khandre