ಮಂಗಳೂರು,ಮೇ,18,2021(www.justkannada.in): ದೇಶದೆಲ್ಲೆಡೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ಉತ್ಪಾದನೆಗೆ ಮೊದಲ ಆದ್ಯತೆಯನ್ನು ನೀಡಬೇಕಾಗಿದೆ. ಈ ಕುರಿತಾದ ಸಂಶೋಧನೆಗಳಿಗೆ ವಿಶ್ವವಿದ್ಯಾಲಯಗಳು ಗಮನ ನೀಡುವುದು ಸೂಕ್ತ ಎಂದು ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.
ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಾಂಸ್ಥಿಕ ಆವಿಷ್ಕಾರ ಸಮಿತಿ (ಐಐಸಿ) ವತಿಯಿಂದ ಕೋವಿಡ್–19 ಪಿಡುಗು ನಿರ್ವಹಣೆ (ವೈದ್ಯಕೀಯ ಆಮ್ಲಜನಕ, ಚಿಕಿತ್ಸೆ ಹಾಗೂ ಲಸಿಕೆ ಸಮಸ್ಯೆ) ಕುರಿತಂತೆ ಅಂತರ ಕಾಲೇಜು ಮಟ್ಟದ ಚರ್ಚಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು, ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಲಸಿಕೆ ಸಂಶೋಧನೆಯಂತಹ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಇದರಿಂದ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದಂತೆ ಆಗುವುದು. ವಿಶ್ವವಿದ್ಯಾಲಯಗಳಲ್ಲಿನ ಸಂಶೋಧಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡು ಈ ಹೊಣೆಯನ್ನು ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.
ಭಾರತವೂ ಸೇರಿದಂತೆ ವಿಶ್ವದ ಅನೇಕ ಸಂಶೋಧನಾ ಸಂಸ್ಥೆಗಳು ಕೊರೊನಾ ಲಸಿಕೆ ಸಂಶೋಧನೆಗೆ ಮಹತ್ವದ ಕಾಣಿಕೆ ನೀಡಿವೆ. ಈ ಪ್ರಮಾಣ ಮತ್ತಷ್ಟು ಹೆಚ್ಚಬೇಕು. ವಿದ್ಯಾರ್ಥಿ ಜೀವನದಲ್ಲೇ ಇಂತಹ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಭವಿಷ್ಯದ ವೃತ್ತಿ ಜೀವನದಲ್ಲಿ ಮಹತ್ತರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯಗಳಲ್ಲಿ ಈ ಬಗೆಯ ಬೌದ್ಧಿಕ ಚಟುವಟಿಕೆಗಳು ನಡೆಯುತ್ತಿರುವುದು ಶ್ಲಾಘನೀಯ ಸಂಗತಿ. ಇದು ಮತ್ತಷ್ಟು ಹೆಚ್ಚಲಿ ಎಂದು ಅವರು ಆಶಿಸಿದರು.
ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಅನಸ್ತೇಷಿಯಾ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀಪಾದ ಜಿ.ಮೆಹದಂಲೆ, ನಿಟ್ಟೆ ವಿಶ್ವವಿದ್ಯಾಲಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಅನಿರ್ಬಾನ್ ಚರ್ಕಬರ್ತಿ, ನಿಟ್ಟೆ ವಿಶ್ವವಿದ್ಯಾಯ ನರ್ಸಿಂಗ್ ವಿಜ್ಞಾನ ಕಾಲೇಜನ ಪ್ರಾಧ್ಯಾಪಕಿ ಡಾ.ಜಸಿಂಟಾ ವೈಗಸ್ ತೀರ್ಪುದಾರರಾಗಿದ್ದರು. ಎ.ಬಿ.ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಕಾಲೇಜಿನ ಡಾ.ರೆಸಿಂಟಾ ಎಲ್.ಕ್ಯಾಸ್ಟೆಲಿನೊ ನಿರ್ವಹಿಸಿದರು.
ಐಐಸಿ ಅಧ್ಯಕ್ಷ ಪ್ರೊ.ಜಿ.ಶ್ರೀನಿಕೇತನ್ ಸ್ವಾಗತಿಸಿದರು. ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಔಷಧ ವಿಜ್ಞಾನ ಕಾಲೇಜಿ ವಿವೇಕ್ ಪೈ ಹಾಗೂ ಡಾ.ವಿಜಯಕುಮಾರ್, ಭಾಗವಹಿಸಿದ್ದರು.
Key words: Let –corona- vaccine -production – priority-Prof. Satish Kumar Bhandari-nitte University