ಬೆಂಗಳೂರು,ಮಾರ್ಚ್,24,2021(www.justkannada.in): ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ರಾಕೇಶ್ ಟಿಕಾಯತ್ ಅವರ ವಿರುದ್ಧ ಶಿವಮೊಗ್ಗದ ಕೋಟೆ ಠಾಣೆಯಲ್ಲಿ ದಾಖಲಿಸಿರುವ ಕೇಸು ಹಾಗೂ ರಾಜ್ಯದ ಇತರೆ ಯಾವುದೇ ಠಾಣೆಗಳಲ್ಲಿ ದಾಖಲಿಸಿರುವ ಕೇಸುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ರಾಜ್ಯ ರೈತ ಮುಖಂಡರು ಆಗ್ರಹಿಸಿದ್ದಾರೆ.
ರೈತಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಗಂಗಾಧರ್, ಕೆಟಿ ಬಸವರಾಜಪ್ಪ, ಹೆಚ್.ಆರ್ ವೀರಸಂಗಯ್ಯ, ಚಾಮರಸ ಮಾಲಿ ಪಾಟೀಲ್, ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್ ಗೃಹ ಸಚಿವರಿಗೆ ಆಗ್ರಹಿಸಿದ್ದಾರೆ.
ಈ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಬಹಿರಂಗ ಪತ್ರ ಬರೆದಿರುವ ರೈತಮುಖಂಡರು, ಕೇಂದ್ರ ಸರ್ಕಾರ ಇತ್ತೀಚೆಗೆ ತಂದ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು ಮತ್ತು ಎಂಎಸ್‌ಪಿ ಶಾಸನ ಬದ್ಧಗೊಳಿಸಬೇಕೆಂಬ ಹಕ್ಕೋತ್ತಾಯದ ರೈತ ಚಳುವಳಿ ದೆಹಲಿಯ ಎಲ್ಲಾ ಗಡಿಗಳಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವುದು ಮುಖ್ಯಾವಾಹಿನಿಯಲ್ಲಿರುವ ಮಾಧ್ಯಮಗಳ ನಿರ್ಲಕ್ಷದ ನಡುವೆಯೂ ಇಡೀ ಲೋಕಕ್ಕೆ ತಿಳಿದ ವಿಷಯವಾಗಿದೆ. ಇದರ ಮುಂದುವರಿಕೆಯ ಭಾಗವಾಗಿ ಕರ್ನಾಟಕದಲ್ಲೂ ರೈತ ಮಹಾಪಂಚಾಯತ್ ಆಯೋಜನೆಗೊಂಡಿತ್ತು.
ಮಾರ್ಚ್ 20 ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ನಡೆದ ರೈತ ಮಹಾಪಂಚಾಯತ್ ನಲ್ಲಿ ಭಾಗವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ರಾಕೇಶ್ ಟಿಕಾಯತ್ ತಮ್ಮ ಭಾಷಣದಲ್ಲಿ “ರಾಜ್ಯದ ರೈತರು ಬೆಂಗಳೂರಿಗೆ ದಿಗ್ಭಂಧನ ಹಾಕಬೇಕು. ಟ್ರಾಕ್ಟರ್ ಗಳನ್ನೇ ಅಸ್ತ್ರವಾಗಿ ಬಳಸಬೇಕು” ಎಂದು ಹೇಳಿದ್ದರೆನ್ನಲಾದ ಅಂಶವನ್ನು ಆಧರಿಸಿ ಐಪಿಸಿ ಕಲಂ 153 ರ ಅಡಿ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರ ಈ ನಡೆಯು ದೇಶದಲ್ಲಿನ ಬಂಡಾಯದ ಧ್ವನಿಗೆ ಮತ್ತು ಎಲ್ಲ ನಾಗರೀಕರಿಗೂ ಇರುವ ವಾಕ್ ಸ್ವಾತಂತ್ರದ ಹರಣದಂತೆ ಕಾಣುತ್ತಿದೆ. ಅಷ್ಟೇ ಅಲ್ಲದೆ ಪೊಲೀಸರು ಒಂದು ಪಕ್ಷದ ವಕ್ತಾರಿಕೆಯನ್ನು ವಹಿಸಿಕೊಂಡು ಪ್ರಭುತ್ವದ ವಿರುದ್ಧದ ಧ್ವನಿಯನ್ನು ಅಡಗಿಸಲು ಕೆಲಸ ಮಾಡುತ್ತಿರುವಂತೆ ತೋರುತ್ತಿದೆ. ಹಾಗಾಗಿ ಈ ಕೂಡಲೇ ಕರ್ನಾಟಕ ರಾಜ್ಯದಲ್ಲಿ ರಾಕೇಶ್ ಟಿಕಾಯತ್ ವಿರುದ್ಧ ದಾಖಲಿಸಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯಬೇಕೆಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
Key words: Letter – Home Minister -demanding -withdrawal – all cases -against -Rakesh Tikayat