ವಿಜಯಪುರ,5,2019(www.justkannada.in): ಭೀಕರ ಮಳೆ ಸಂದರ್ಭಗಳಲ್ಲಿ ಜಲಾಶಯದಿಂದ ಏಕಾಏಕಿ ನೀರು ಹರಿಸುವುದರಿಂದ ಪ್ರವಾಹ ಉಂಟಾಗುವುದನ್ನು ತಡೆಯಲು ಮಹಾರಾಷ್ಟ್ರ, ತೆಲಂಗಾಣ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ವಿಜಯಪುರ ನಗರದ ನ್ಯೂ ಐಬಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಪ್ರವಾಹ ಪೀಡಿತ ಸಂತ್ರಸ್ತರ ರಕ್ಷಣೆ ಹಾಗೂ ಪುನರ್ವಸತಿ ಕಾರ್ಯ ನಡೆದಿದೆ. ಆಯಾ ಜಿಲ್ಲಾಧಿಕಾರಿಗಳ ಬಳಿ 15-20 ಕೋಟಿ ರೂಪಾಯಿ ಹಣ ಇದ್ದು, ಇನ್ನೂ ಹೆಚ್ಚಿನ ಪ್ರಮಾಣದ ಅನುದಾನ ಅಗತ್ಯ ಇದ್ದಲ್ಲಿ ತಕ್ಷಣ ಬಿಡುಗಡೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿ, ಎಲ್ಲ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಲು ನಿರ್ದೇಶನ ನೀಡಿದ್ದೇನೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ಪ್ರವಾಹದಿಂದ ನದಿ ತೀರದ ಜಮೀನಿಗೆ ನೀರು ನುಗ್ಗಿ ಬೆಳೆಹಾನಿ ಆಗಿರುವ ಕುರಿತು ಸಮೀಕ್ಷೆ ನಡೆಸಿ, ರೈತರಿಗೆ ಸೂಕ್ತ ಪರಿಹಾರ ನೀಡಲು ಸೂಚಿಸಲಾಗಿದೆ ಎಂದು ವಿವರಿಸಿದರು. ಇಂದು ರಾತ್ರಿ ದೆಹಲಿಗೆ ತೆರಳಿ ಪ್ರಧಾನಿ ಮೋದಿ, ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ, ರಾಜ್ಯದ ಪ್ರವಾಹ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು, ರಾಜ್ಯ ನೆರವು ನೀಡಲು ಕೋರುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.
2009 ರಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಕಂಡು ಬಂದಾಗ ನಾನೇ ಮುಖ್ಯಮಂತ್ರಿ ಆಗಿದ್ದೆ. ಆಗ ಬಾಧಿತ ಗ್ರಾಮಗಳ ಸ್ಥಳಾಂತರ ಮಾಡಿದ್ದೆ. ಈಗಲೂ ಅಗತ್ಯ ಕಂಡುಬಂದಲ್ಲಿ ಗ್ರಾಮ ಸ್ಥಳಾಂತರಕ್ಕೆ ಕ್ರಮಕೈಗೊಳ್ಳುವುದಾಗಿ ಸಿಎಂ ಬಿಎಸ್ ವೈ ಭರವಸೆ ನೀಡಿದರು.
ಇನ್ನು ಬಿಎಸ್ ಯಡಿಯೂರಪ್ಪ ವಿಜಯಪುರ ನೂ ಐಬಿಯಲ್ಲಿ ಸಭೆ ನಡೆಸುತ್ತಿದ್ದರೆ, ಐಬಿ ಹೊರಗಡೆ ಬಿಜೆಪಿ ಮಹಿಳಾ ಘಟಕದ ಮುಖಂಡರು ಹಾಗೂ ರೈತಸಂಘದ ನಾಯಕರು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಸಭೆಯಲ್ಲಿ ಭಾಗವಹಿಸಲು ಒಳಗೆ ಬಿಡುವಂತೆ ವಾಗ್ವಾದ ನಡೆಸಿದರು. ಆದ್ರೆ ಇದಕ್ಕೆ ಆಸ್ಪದ ನೀಡದ ಪೊಲೀಸರು, ಇದು ಸರ್ಕಾರಿ ಸಭೆ ಹಾಗಾಗಿ ಒಳಗೆ ಬಿಡುವುದಿಲ್ಲ ಎಂದರು.
Key words: Letter -Maharashtra -Telangana -CM – flooding- CM BS Yeddyurappa