ಬೆಂಗಳೂರು, ಸೆ,26,2024: (www.justkannada.in news) ರಾಜ್ಯಪಾಲರ ಕಛೇರಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಅಥವಾ ಸರ್ಕಾರದ ಯಾವುದೇ ಅಧಿಕಾರಿಗೆ ಸ್ವೀಕೃತವಾಗುವ ಪತ್ರಗಳ ವಿಲೇವಾರಿ ಕೈಗೊಳ್ಳುವ ಮುನ್ನ ಸಚಿವ ಸಂಪುಟದ ಗಮನಕ್ಕೆ ತರಬೇಕೆಂದು ತದನಂತರ ಮುಖ್ಯ ಕಾರ್ಯದರ್ಶಿಯವರು ಸಚಿವ ಸಂಪುಟದ ನಿರ್ಣಯದಂತೆ ರಾಜಭವನಕ್ಕೆ ಮಾಹಿತಿಯನ್ನ ಒದಗಿಸುಲು ರಾಜ್ಯ ಸಚಿವ ಸಂಪುಟ ಇಂದು ನಿರ್ಣಯಿಸಿದೆ.
ಸಚಿವ ಸಂಪುಟದ ಸಭೆಯ ನಂತರ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಶ್ರೀ ಎಚ್.ಕೆ. ಪಾಟೀಲ ಇಂದಿಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ರಾಜ್ಯಪಾಲರು ದಿನಾಂಕ 17.8.2024ರ ಪತ್ರದಲ್ಲಿ ರಾಜ್ಯಪಾಲರ ಕಛೇರಿಯಲ್ಲಿ ಬಾಕಿ ಇರುವ ಲೋಕಾಯುಕ್ತದಿಂದ ಸ್ವೀಕೃತವಾಗಿರುವ ಅಭಿಯೋಜನಾ ಮಂಜೂರಾತಿ ಪ್ರಕರಣಗಳ ಕುರಿತ ಮಾಹಿತಿ ಹೇಗೆ ಸೋರಿಕೆಯಾಯಿತು ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ರಾಜ್ಯಪಾಲರು ಕರ್ನಾಟಕ ಸರ್ಕಾರದ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದರು.
ಪೊಲೀಸ್ ಮಹಾನಿರ್ದೇಶಕರು ದಿನಾಂಕ 20.8.2024 ರಂದು ಪತ್ರ ಬರೆದು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ವಿಶೇಷ ತನಿಖಾದಳ ಕರ್ನಾಟಕ ಲೋಕಾಯುಕ್ತ ಬೆಂಗಳೂರು ರವರಿಗೆ ಪತ್ರ ಬರೆದು ಈ ಕುರಿತು ವಿವರಗಳನ್ನು ತಿಳಿಯಬಯಸಿದ್ದರು.
ಈ ಪತ್ರಕ್ಕೆ ಉತ್ತರವಾಗಿ ದಿನಾಂಕ 4.9.2024 ರಂದು ವಿಶೇಷ ತನಿಖಾ ದಳದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ರವರು ವರದಿ ಕಳಿಸಿ ಈ ಸೋರಿಕೆಯಾದ ಕಾಗದಪತ್ರಗಳು 24.11.2023ರಿಂದ 8.8.2024 ರವರೆಗೆ ರಾಜಭವನ ಸಚಿವಾಲಯದಲ್ಲಿಯೇ ಎಂಟುತಿಂಗಳ ವರೆಗೆ ಇದ್ದವು ಎಂದು ಉತ್ತರ ಬರೆದಿದ್ದಾರೆ ಎಂದು ಸಚಿವರು ವಿವರಿಸಿದರು.
ರಾಜಭವನ ಸಚಿವಾಲಯಕ್ಕೆ ಸಂಬಂಧಪಟ್ಟಂತೆ ಯಾವ ಹಂತದಲ್ಲಿ ಮಾಹಿತಿ ಸೋರಿಕೆಯಾಗಿದೆ, ದಾಖಲೆಗಳು ಬಹಿರಂಗಗೊಂಡಿವೆ ಎಂಬ ಬಗ್ಗೆ ತನಿಖೆ ನಡೆಸಲು ತಮಗೆ ಅನುಮತಿ ನೀಡಬೇಕೆಂದು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ರವರು ಕೋರಿರುತ್ತಾರೆ. ಈ ವಿಷಯ ಮಾಧ್ಯಮದಲ್ಲಿ ಹೇಗೆ ಪ್ರಸಾರವಾಯಿತು ಎಂಬ ಬಗ್ಗೆ ತನಿಖೆ ನಡೆಸಲು ಅನುಮತಿ ಕೋರಿರುವುದಾಗಿ ಸಚಿವರು ಪೂರ್ಣ ವಿವರಗಳನ್ನು ನೀಡಿದರು.
key words: Instructions, to bring, the letters of, the Governor, to the notice, of the Cabinet, and thereafter, dispose of them.