ಬೆಂಗಳೂರು ಜನವರಿ,6,2021(www.justkannada.in): ನಗರ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆಯ ಜೊತೆ ಶೇಕಡಾ 6% ಗ್ರಂಥಾಲಯ ಸೆಸ್ ಗಳನ್ನು ಸಂಗ್ರಹಿಸುತ್ತಿದ್ದು, ಈ ಹಣವನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸುತ್ತಿದೆ. ಅದಕ್ಕೆ ಬದಲಾಗಿ ಗ್ರಂಥಾಲಯ ಸೆಸ್ ರೂಪದಲ್ಲಿ ಸಂಗ್ರಹಿಸುವ ಸಂಪೂರ್ಣ ಹಣವನ್ನು ಪುಸ್ತಕೋದ್ಯಮದ ಪ್ರಗತಿಗೆ ಪೂರಕವಾಗುವಂತೆ ಬಳಕೆಯಾಗಬೇಕು ಎಂದು ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ.
ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನಗಳನ್ನು ಪ್ರದಾನ ಮಾಡಿ ಮಾತನಾಡಿದರು. ಇಂದು ಕನ್ನಡ ಪುಸ್ತಕೋದ್ಯಮ ಅನೇಕ ಸಂಕಟಗಳನ್ನು ಅನುಭವಿಸುತ್ತಿದೆ. ಸೆಸ್ ಮೂಲಕ ಸಂಗ್ರಹವಾಗುವ ಸುಮಾರು ರೂ.500.00ಕೋಟಿಗಳನ್ನು ಕನ್ನಡ ಪುಸ್ತಕ ಅಭಿವೃದ್ಧಿಗೆ ಬಳಸಿದರೆ ಅದರಿಂದ ಕನ್ನಡ ಪುಸ್ತಕ ಲೋಕದ ಚಿತ್ರವೇ ಬದಲಾಗುತ್ತದೆ. ಪುಸ್ತಕೋದ್ಯಮವನ್ನು ಗುಣಾತ್ಮಕವಾಗಿ ಬೆಳೆಸಲು ಸರ್ಕಾರ ಹೊಸ ಯೋಜನೆಗಳನ್ನು ಘೋಷಿಸುವುದು ಅಗತ್ಯವಿದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರ ಪರಿಚಯವುಳ್ಳ ‘ದರ್ಪಣ’ ಕೈಪಡಿಯನ್ನು ಬಿಡುಗಡೆ ಮಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರವು ಮುಂಬರುವ ದಿನಗಳಲ್ಲಿ ಆಧುನಿಕ ಸಮೂಹ ಮಾದ್ಯಮಗಳನ್ನು ಬಳಸಿಕೊಂಡು ಪುಸ್ತಕೋದ್ಯಮಕ್ಕೆ ಪೂರಕವಾಗುವ ಯೋಜನೆಗಳನ್ನು ರೂಪಿಸುತ್ತದೆ ಎಂದು ಹೇಳಿದರು. ಕೊರೋನಾ ಸಂಕಷ್ಟದ ನಡುವೆಯೂ ಪುಸ್ತಕ ಪ್ರಾಧಿಕಾರ ತನ್ನ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುತ್ತಿದೆ. ಮುಂಬರುವ ದಿನಗಳಲ್ಲಿ ಪ್ರಾಧಿಕಾರ ಹೆಚ್ಚಿನ ಹುಮ್ಮಸ್ಸಿನಿಂದ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಬಸವರಾಜ ಕಲ್ಗುಡಿ ಅವರು ಎಂ.ಎಂ. ಕಲಬುರ್ಗಿ ಅವರನ್ನು ನೆನೆದು ಭಾವುಕರಾದರು. ವಿಚಾರವಂತರ ಹತ್ಯೆ ಮತ್ತು ವಿಚಾರಗಳ ದಮನ ಮಾಡುವುದು ಮಾನವೀಯತೆ ಇಲ್ಲದವರ ಕೆಲಸ. ಇದು ಕನ್ನಡ ಸಾಂಸ್ಕೃತಿಕ ಲೋಕದ ಘನತೆಯನ್ನು ಹಾಳು ಮಾಡುತ್ತದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಅವರು ಮಾತನಾಡಿ ಪುಸ್ತಕ ಜ್ಞಾನಾರ್ಜನೆ ಜೊತೆಗೆ ಜೀವನದ ದಿಕ್ಕನ್ನು ಬದಲಿಸುತ್ತದೆ. ಹಳ್ಳಿಗೊಂದು ಗ್ರಂಥಾಲಯವಿದ್ದರೆ ಆ ಹಳ್ಳಿಯ ಯುವಜನತೆಗೆ ಓದುವ ಗೀಳು ಹತ್ತುತ್ತದೆ. ಓದಿನ ಗೀಳು ಅವರ ಬದುಕಿನ ದೃಷ್ಟಿಕೋನವನ್ನು ಉನ್ನತೀಕರಿಸಿ ಅವರು ಜೀವನದಲ್ಲಿ ಮೇಲೆ ಬರಲು ನೆರವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಸ್ವಾಗತಿಸಿದರು. ಆಡಳಿತಾಧಿಕಾರಿ ಸೌಭಾಗ್ಯ ವಂದಿಸಿದರು.
Key words: library -cess – used – development – library-Narahalli- Balasubramanya.