ಬೆಂಗಳೂರು, ಜುಲೈ 31, 2019 (www.justkannada.in): ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಲೆಫ್ಟಿನೆಂಟ್ ಕರ್ನಲ್ (ಗೌರವ) ಮಹೇಂದ್ರ ಸಿಂಗ್ ಧೋನಿ ಮಿಷನ್ ಕಾಶ್ಮೀರ್ ಇಂದಿನಿಂದ ಶುರುವಾಗಲಿದೆ.
ಧೋನಿ ದಕ್ಷಿಣ ಕಾಶ್ಮೀರದ ವಿಕ್ಟರ್ ಫೋರ್ಸ್ ಜೊತೆ 15 ದಿನಗಳನ್ನು ಕಳೆಯಲಿದ್ದಾರೆ. ಜುಲೈ 31ರಿಂದ ಆಗಸ್ಟ್ 15ರವರೆಗೆ ಧೋನಿ ತರಬೇತಿ ಪಡೆಯಲಿದ್ದಾರೆ.
106 ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್ ಭಾಗವಾಗಿರುವ ಧೋನಿ, ತರಬೇತಿ ಸಮಯದಲ್ಲಿ ಗಸ್ತು, ಕಾವಲು ಮತ್ತು ಪೋಸ್ಟ್ ಡ್ಯೂಟಿ ಮಾಡಲಿದ್ದಾರೆ. ದಕ್ಷಿಣ ಕಾಶ್ಮೀರದ ಅವಂತಿಪೋರಾದಲ್ಲಿ ಮಹೇಂದ್ರ ಸಿಂಗ್ ಧೋನಿ ಉಳಿಯಲಿದ್ದಾರೆ. ಕಳೆದ ಕೆಲ ದಿನಗಳಿಂದ ದಕ್ಷಿಣ ಕಾಶ್ಮೀರದ ಅವಂತಿಪೋರಾ ಭಯೋತ್ಪಾದಕ ಚಟುವಟಿಕೆಯ ಕೇಂದ್ರ ಬಿಂದುವಾಗಿದೆ. ಈ ಸ್ಥಳದಲ್ಲಿ ಧೋನಿ ತರಬೇತಿ ಪಡೆಯುತ್ತಿರುವುದು ವಿಶೇಷ.
ಧೋನಿ ಮೊದಲು ತರಬೇತಿಗೆ ಅನುಮತಿ ಕೇಳಿದ್ದರು. ಸೇನೆಯ ಮುಖ್ಯಸ್ಥರು ಅನುಮತಿ ನೀಡುತ್ತಿದ್ದಂತೆ ಧೋನಿ ಬಿಸಿಸಿಐಗೆ ಈ ವಿಷ್ಯ ತಿಳಿಸಿದ್ದರು. ಇದೇ ಕಾರಣಕ್ಕೆ ಧೋನಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿಲ್ಲ.