ವಿಜಯಪುರ,ಮಾರ್ಚ್,30,2023(www.justkannada.in): ಜನರ ಜೊತೆ ಸಂಪರ್ಕದಲ್ಲಿದ್ದು ಜನರ ಸಮಸ್ಯೆ ಆಲಿಸುವ ಕೆಲಸ ಮಾಡುವ ವ್ಯಕ್ತಿಗೆ ಮತ ನೀಡಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ನಿನ್ನೆಯಷ್ಟೇ ದಿನಾಂಕ ನಿಗದಿಯಾಗಿದ್ದು ಮೇ 10 ರಂದು ಮತದಾನ ಮೇ 13 ರಂದು ಫಲಿತಾಂಶ ಹೊರಬೀಳಲಿದೆ. ಈ ಹಿನ್ನಲೆಯಲ್ಲಿ ವಿಜಯಪುರದಲ್ಲಿ ಇಂದು ಮಾತನಾಡಿದ ಬಸವರಾಜ ಹೊರಟ್ಟಿ, ಯಾವ ವ್ಯಕ್ತಿ ಕೆಲಸ ಮಾಡುತ್ತಾನೆ, ಜನರ ಸಂಪರ್ಕದಲ್ಲಿರುತ್ತಾನೆ, ಜನರ ತೊಂದರೆಗೆ ಸ್ಪಂದಿಸುತ್ತಾನೆ ಅಂತಹ ವ್ಯಕ್ತಿಗೆ ಮತ ಹಾಕಿ, ರಾಜಧಾನಿಯಲ್ಲಿ ಕುಳಿತು ಹಣ ಮಾಡುವವರಿಗೆ ಮತ ಹಾಕಬೇಡಿ, ನಾಡಿನ ಕಾಳಜಿ ಇರುವ ವ್ಯಕ್ತಿಗೆ ಮತ ಹಾಕಿ ಎಂದು ಮನವಿ ಮಾಡಿದರು.
ಮತದಾರರನ್ನು ಸೆಳೆಯಲು ವಿವಿಧ ಗಿಫ್ಟ್ ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ, ಗಿಫ್ಟ್ ವಿಚಾರದಲ್ಲಿ ಜನರು ಕೆಟ್ಟಾಗಲೇ ರಾಜಕಾರಣಿಗಳು ಕೆಟ್ಟಿದ್ದಾರೆ. ರಾಜಕಾರಣಿಗಳು ನೀಡುವ ಕಾಣಿಕೆಯ ಮೇಲೆ ಜನರು ಜೀವನ ಮಾಡುತ್ತಾರಾ ಎಂದು ಪ್ರಶ್ನಿಸಿದರು.
ಗಿಫ್ಟ್ ಹಂಚಿಕೆ ಘಟನೆಗಳು ಆಗಬಾರದು. ಹಣ ಹಾಗೂ ಇತರೆ ಕಾಣಿಕೆ ನೀಡಿ ಆಯ್ಕೆಯಾದವ ಏನು ಆಗುತ್ತಾನೆ? ಹಣಕೊಟ್ಟು ಆಯ್ಕೆಯಾದ ಬಳಿಕ ನೀವು ಪುಗಸಟ್ಟೆ ಮತ ಹಾಕಿಲ್ಲ ಎಂದು ಮತದಾರರಿಗೆ ಹೇಳುತ್ತಾನೆ. ಹೀಗಾಗಿ ಗಿಫ್ಟ್ ಗಳ ಹಂಚಿಕೆಯಾಗಬಾರದು ಎಂದರು.
Key words: listens problems –works-vote –Basavaraja hoaratti