ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುವವರಿಗೆ ಉದ್ದಟತನ, ಸಿನಿಕತನ ಇರಬಾರದು- ಡಾ.ಬರಗೂರು ರಾಮಚಂದ್ರಪ್ಪ

ಬೆಂಗಳೂರು,ಡಿಸೆಂಬರ್,28,2024 (www.justkannada.in): ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುವವರಿಗೆ ಉದ್ದಟತನ ಮತ್ತು ಸಿನಿಕತನ ಇರಬಾರದು ಇದರಿಂದ ಸೃಜಶೀಲ ಸಾಹಿತ್ಯ ಹಾದಿತಪ್ಪುತ್ತದೆ ಎಂದು ನಾಡೋಜ, ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ಪಟ್ಟರು.

ಬೆಂಗಳೂರಿನಲ್ಲಿ ಶನಿವಾರ ಪತ್ರಕರ್ತ ತುರುವನೂರು ಮಂಜುನಾಥ ಅವರ ‘ಮೊಳಕೆ ಕೃತಿಯನ್ನು ಬಿಡಗಡೆಗೊಳಿಸಿ ಮಾತನಾಡಿದ ಅವರು,  ಸಾಹಿತ್ಯ ಕ್ಷೇತ್ರದಲ್ಲಿ ವಿನಮ್ರತೆಯಿಂದ ವಿಷಯ  ಮತ್ತು ವಿಮರ್ಶೆಗಳ ಮಂಡನೆಯಿಂದ  ಬರಹಗಾರ ಮೌಲಿಕ ಗುಣಗಳು ಪ್ರಮುಖ ಪಾತ್ರ ವಹಿಸುತ್ತಾನೆ, ಆ ನಿಟ್ಟಿನಲ್ಲಿ ವಿನಮ್ರತೆಯಿಂದಲೇ ತುರುವನೂರು ಮಂಜುನಾಥ ಈ ಕೃತಿಯಲ್ಲಿ ವಿಷಯಮಂಡನೆ ಮಾಡುವ ಮೂಲಕ ಜನರಿಗೆ ನೇರವಾಗಿ ತಲುಪುವ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು

ಸಾಹಿತ್ಯ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಂವಾದ ಸಂಸ್ಕೃತಿ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು,  ಹಿಂದಿನ ಸಾಹಿತಿಗಳ ನಡುವೆ ಸಾಹಿತ್ಯ ಸಂವಾದಗಳು ನಡೆಯುತ್ತಿದ್ದ ಕಾರಣ ಗುಣಮಟ್ಟದ ಸಾಹಿತ್ಯ ರಚನೆಯಾಗುತ್ತಿದ್ದವು ಆದರೆ ಇತ್ತೀಚಿನ ದಿನಗಳ ಅಂತಹ ವಾತಾವರಣ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ ಕುರಿತು ಪರಿಚಯಿಸಿರುವ ಅವರು,  ಉತ್ತಮ ವಿಮರ್ಶೆಯೊಂದನ್ನು ಮಂಡಿಸಿದ್ದಾರೆ.  ಹಾಗೆಯೇ ಗದ್ದರ್ ಕುರಿತಂತಹ, ಅವರ ಹೋರಾಟ ಮತ್ತು ಕೊನೆ ಕಾಲದ ಕುರಿತು ಅವರ ಜೀವಂತಿಕೆಯನ್ನು ಪ್ರಸ್ತಾಪ ಮಾಡಿದ್ದಾರೆ. ವ್ಯಕ್ತಿ ಚಿತ್ರಗಳಲ್ಲಿ ಉತ್ತಮವಾದದ್ದನ್ನು ಮಾತ್ರ ಆಯ್ಕೆಮಾಡಿಕೊಂಡು ಜನರಿಗೆ ತಲುಪಿಸುವ ಕೆಲಸ ಮಂಜುನಾಥ್ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಮತನಾಡಿ ಪತ್ರಿಕೋದ್ಯಮದಲ್ಲಿ ಇಂದು ಸತ್ಯ ಅಸತ್ಯವಾಗಿ ಹೋಗಿದೆ. ಸತ್ಯದ ಹೆಸರಿನಲ್ಲಿ ಸುಳ್ಳುಗಳನ್ನು ರಾರಾಜಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಈ ನಿಟ್ಟಿನಲ್ಲಿ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಇನ್ನೊಬ್ಬ ಹಿರಿಯ ಪ್ರತಕರ್ತ ಅನಂತ ಚಿನಿವಾರ ಮಾತನಾಡಿ ಇಂದು ಪತ್ರಕರ್ತನಾದವನಿಗೆ ಅಹಂ ಮತ್ತು ಸಿನಿಕತನ ಇರಬಾರದು ಅದರಿಂದ ಸುದ್ದಿಗಳ ಮೇಲೆ ಪರಿಣಾಮ ಬೀರುತ್ತವೆ.  ಹೀಗಾಗಿಯೇ ಇಂದು ಸುದ್ದಿಗಳ ಗುಣಮಟ್ಟ ಕಡಿಮೆಯಗುತ್ತಿದೆ ಎಂದು ವಿಷಾದಿಸಿದರು.

ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕೋದ್ಯಮದ ಸ್ಥಿತಿ ಶೋಚನೀಯವಾಗಿದೆ ಸೋಶಿಯಲ್ ಮೀಡಿಯಾ ಹಾವಳಿಯಿಂದ ಪತ್ರಕರ್ತರು ಯಾರು, ಯಾರು ಅಲ್ಲ ಎನ್ನುವುದನ್ನು ಗುರುತಿಸಲು ಆಗದ ಸ್ಥಿತಿ ಬಂದೊದಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪತ್ರಿಕೆಗಳು ಒಂದು ಕಾಲದಲ್ಲಿ ಜಾಹೀರಾತು ಇಲ್ಲದೆ ಪ್ರಕಟವಾಗುತ್ತಿದ್ದವು.  ಆದರೆ ಈಗ ಜಾಹೀರಾತು ಇಲ್ಲದೆ ಪತ್ರಿಕೆಗಳು ನಡೆಯುವುದು ಕಷ್ಟವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಜಿ.ಎನ್,ಶಿವಮೂರ್ತಿ ಮತ್ತು ಮೊಳಕೆ ಕೃತಿಯ ಲೇಖಕ ಮತ್ತು ಪತ್ರಕರ್ತ ತುರುವನೂರು ಮಂಜುನಾಥ ಇದ್ದರು. ಸಮಾರಂಭದ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಹನುಮೇಶ್ ಯಾವಗಲ್ ನಿರೂಪಿಸಿದರು.

Key words: cultivate, literature not be, arrogant, Dr. Baraguru Ramachandrappa