ಬೆಂಗಳೂರು,ಸೆಪ್ಟಂಬರ್,3,2020(www.justkannada.in): ಸರ್ಕಾರಿ ಶಾಲೆಗಳಲ್ಲೂ ಎಲ್ ಕೆಜಿ ಮತ್ತು ಯುಕೆಜಿ ಆರಂಭಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ಮಾಧುಸ್ವಾಮಿ, ಪ್ರಸಕ್ತ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ಆರಂಭಿಸಲು ನಿರ್ಧರಿಸಲಾಗಿದೆ. ಈ ವರ್ಷದಲ್ಲಿ 276 ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ಎಲ್ ಕೆಜಿ ಯುಕೆಜಿ ಆರಂಭ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇನ್ನು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ. ಹಾವೇರಿಯಲ್ಲಿ ಕಾಲೇಜು ಸ್ಥಾಪನೆಗೆ 327 ಕೋಟಿ ರೂ. ಯಾದಗಿರಿಯಲ್ಲಿ ಕಾಲೇಜು ಸ್ಥಾಪನೆಗೆ 309 ಕೋಟಿ ರೂ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಹಾಗೆಯೇ ಪೊನ್ನಂಪೇಟೆಯಲ್ಲಿ 13 ಕೋಟಿ ರೂ ವೆಚ್ಚದಲ್ಲಿ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಇನ್ನು ಮರವಂತೆಯಲ್ಲಿ 85 ಕೋಟಿ ರೂ. ವೆಚ್ಚದಲ್ಲಿ ಮೀನು ಬಂದರು ನಿರ್ಮಾಣ, ಜೋಗವನ್ನು ಸರ್ವಋತು ಜಲಪಾತ ಮಾಡಲು ಒಪ್ಪಿಗೆ ನೀಡಲಾಗಿದೆ. 108 ಆ್ಯಂಬುಲೆನ್ಸ್ ಸೇವೆಗೆ ಟೆಂಡರ್ ಕರೆಯಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
Key words: LKG – UKG –start- government schools-Cabinet Meeting-minister- Madhuswamy