ಮೈಸೂರು,ಮಾರ್ಚ್,1,2025 (www.justkannada.in): ಕೂಡಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು ಮತ್ತು ಗ್ರೇಟರ್ ಮೈಸೂರು ಮಾಡಲು ಮುಂದಾಗಿರುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ಆಗ್ರಹಿಸಿ ಮಾರ್ಚ್ 5 ರಿಂದ ಉಪವಾಸ ಸತ್ಯಾಗ್ರಹ ಮಾಡಲು ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹೋರಾಟ ಸಮಿತಿ ತೀರ್ಮಾನಿಸಿದೆ.
ಈ ಸಂಬಂಧ ಇಂದು ಮಹಾನಗರ ಪಾಲಿಕೆ ಚುನಾವಣೆ ಹೋರಾಟ ಸಮಿತಿ ವತಿಯಿಂದ ಜಲದರ್ಶಿನಿ ಅತಿಥಿಗೃಹದಲ್ಲಿ ಚಳುವಳಿಗಾರರು ಹಾಗೂ ವಿವಿಧ ಸಂಘಟನೆಯ ಮುಖಂಡರುಗಳ ಜೊತೆ ಸಭೆ ನಡೆಯಿತು.
ಕೂಡಲೇ ಮೈಸೂರು ನಗರ ಪಾಲಿಕೆ ಚುನಾವಣೆ ಮಾಡಬೇಕು. ಗ್ರೇಟರ್ ಮೈಸೂರು ಮಾಡಲು ಮುಂದಾಗಿರುವುದನ್ನು ಸರ್ಕಾರ ನಿಲ್ಲಿಸಬೇಕು. ಶಾಸಕರುಗಳು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಸಲುವಾಗಿ ಸ್ಥಳೀಯ ಚುನಾವಣೆ ನಡೆಸಲು ಆಸಕ್ತಿ ತೋರುತ್ತಿಲ್ಲ . ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಕಸದ ಸಮಸ್ಯೆ, ಕುಡಿಯುವ ನೀರು, ವಿದ್ಯುತ್ ಸಮಸ್ಯೆಗಳಿವೆ. ದಾಖಲಾತಿಗಳನ್ನು ಪಡೆಯಲು ಜನರನ್ನ ಅಧಿಕಾರಿಗಳು ಹಲವಾರು ಬಾರಿ ಸುತ್ತಾಡಿಸುತ್ತಾರೆ . ಹೀಗಾಗಿ ಸರ್ಕಾರ ತಕ್ಷಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಈ ವೇಳೆ ಮಾತನಾಡಿದ ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್, ಬೃಹತ್ ಮೈಸೂರು ಮಹಾನಗರ ಪಾಲಿಕೆ ಮಾಡುವ ಮೊದಲು ಈಗಿನ ಮಹಾನಗರ ಪಾಲಿಕೆಯ ಸಮಸ್ಯೆಗಳೇ ಬಗೆಹರಿದಿಲ್ಲ ಅದರತ್ತ ಸರ್ಕಾರ ಗಮನ ಹರಿಸಬೇಕು. ಪಾಲಿಕೆ ಚುನಾವಣೆ ಮಾಡಿದ ನಂತರವೇ ಬೃಹತ್ ಮೈಸೂರು ಬಗ್ಗೆ ಸರ್ಕಾರ ಯೋಚನೆ ಮಾಡಲಿ ಎಂದು ಸಲಹೆ ನೀಡಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಗ್ರೇಟರ್ ಮೈಸೂರು ಮಾಡಲು 99 ವಾರ್ಡ್ ಗಳಿಗೆ ಹೆಚ್ಚಿಸಲು ತೀರ್ಮಾನ ಮಾಡಿದ್ದಾರೆ. ಆದರೆ ಅಷ್ಟು ವಾರ್ಡ್ ಗಳನ್ನು ಏಕಾಏಕಿ ಹೆಚ್ಚಿಸಿದರೆ ಆ ಎಲ್ಲಾ ಹೊಸ ಬಡಾವಣೆಗಳ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆಯಾ ಎಂಬುದನ್ನು ಚಿಂತನೆ ಮಾಡಬೇಕು ಗ್ರೇಟರ್ ಮೈಸೂರು ಮಾಡಲು 15 ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ, ಆದರೂ ಸಫಲವಾಗಿಲ್ಲ ಎಂದರು.
ಈ ಸಭೆಯಲ್ಲಿ, ಸಿಪಿಐ (ಎಂ) ಮುಖಂಡ ಲಜಗನ್ನಾಥ್ , ಎಸ್.ಡಿ.ಪಿ.ಐ ಪಕ್ಷದ ಉಪಾದ್ಯಕ್ಷ ಪುಟ್ಟನಂಜಯ್ಯ ದೇವನೂರು , ಭಾರತೀಯ ಪರಿವರ್ತನಾ ಸಂಘದ ರಾಜ್ಯ ಸಂಚಾಲಕ ಸೋಸಲೆ ಸಿದ್ದರಾಜ , ಸಾಮಾಜಿಕ ಹೋರಾಟಗಾರರಾದ ಅರವಿಂದ್ ಶರ್ಮ , ಆಮ್ ಆದ್ಮಿ ಪಕ್ಷದ ರಂಗಯ್ಯ , ಕೆ.ಆರ್.ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಸೋಮಸುಂದರ್, ಮುಖಂಡರುಗಳಾದ ನಾಗೇಂದ್ರ ,ಮಾ ಸ ಪ್ರವೀಣ್, ರವಿಕುಮಾರ್ ,ರಾಜೇಂದ್ರ , ಆನಂದ್, ರವಿ , ಕನ್ನಡ ಹೋರಾಟಗಾರರಾದ ಸುರೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.
Key words: local body, elections, immediately, Mysore, Meeting