ಮೈಸೂರು,ಫೆಬ್ರವರಿ,6,2021(www.justkannada.in): ದೇಸಿಯ ಉತ್ಪನ್ನಗಳ ಬಳಕೆ ಹೆಚ್ಚಾಗಬೇಕು. ಆಗ ಮಾತ್ರ ಪ್ರಧಾನಿ ಮೋದಿಯವರ ಹೇಳಿಕೆಯಂತೆ ‘ಲೋಕಲ್ ಟು ಗ್ಲೋಬಲ್ ‘ ಆಗಲು ಸಾಧ್ಯ. ಚೀನಾ ವಸ್ತುಗಳ ಬಳಕೆ ಬಿಟ್ಟು, ಪ್ರತಿ ಮನೆಯಲ್ಲು ಸ್ಥಳೀಯ ಉತ್ಪನ್ನಗಳ ಬಳಕೆ ಆರಂಭವಾಗಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದರು.
ಮೈಸೂರಿನಲ್ಲಿ ನಡೆಯುತ್ತಿರುವ 25 ನೇ ಹುನಾರ್ ಹಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕೇಂದ್ರ ಸರ್ಕಾರದ ಅಲ್ಪಸಂಖ್ಯಾತ ಇಲಾಖೆಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಹುನಾರ್ ಹಾತ್ ಕಾರ್ಯಕ್ರಮವನ್ನು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರ ಜೊತೆಯಲ್ಲಿ ಸಚಿವ ನಾರಾಯಣಗೌಡ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಚಿವ ಡಾ. ನಾರಾಯಣಗೌಡ ಅವರು, ದೇಸೀಯ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆಯ ಸಮಸ್ಯೆ ಇದೆ. ಅದಕ್ಕಾಗಿ ಉತ್ತಮ ಮಾರುಕಟ್ಟೆ ನಿರ್ಮಾಣ ಆಗಬೇಕು. ಆ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೆಲಸ ಮಾಡಲಿದೆ. ಕುಶಲಕರ್ಮಿಗಳು ದೇಶೀಯವಾಗಿ ತಮ್ಮ ಕೈಗಳಿಂದ ಸಿದ್ದಪಡಿಸಿದ ಉತ್ಪನ್ನಗಳಿಗೆ ‘ಹುನರ್ ಹಾತ್’ ಉತ್ತಮ ವೇದಿಕೆಯಾಗಿದೆ. `ವೋಕಲ್ ಫಾರ್ ಲೋಕಲ್’ ಎಂಬ ಹೆಸರಿನಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ. ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರ `ಸಬ್ಕಾ ಸಾತ್- ಸಬ್ಕಾ ವಿಕಾಸ್’ ಆಶಯದಂತೆ ಹುನಾರ್ ಹಾತ್ ಅಲ್ಪಸಂಖ್ಯಾತ ಸಮುದಾಯಗಳ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲ ವಸ್ತುಗಳ ಸಮೃದ್ಧ ಪರಂಪರೆಯನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ಗುರಿಯನ್ನು ಹೊಂದಿದೆ. ಕಳೆದ 5 ವರ್ಷಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳು ಈ ಕಾರ್ಯಕ್ರಮದ ಮೂಲಕ ಉದ್ಯೋಗವಕಾಶಗಳನ್ನು ಕಂಡುಕೊಂಡಿದ್ದಾರೆ. ಚೀನಾ ವಸ್ತುಗಳ ಬದಲು, ದೇಸಿಯ ವಸ್ತುಗಳ ಬಳಕೆ ಹೆಚ್ಚಾಗಬೇಕು. ಆಗ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ದೇಸಿಯ ಉತ್ಪನ್ನಗಳ ತಯಾರಿಕೆ ಆಗಬೇಕು-ಕೇಂದ್ರ ಸಚಿವ ಡಿ.ವಿ ಸದಾನಂದಗೌಡ…
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಇಲಾಖೆ ಸಚಿವ ಡಿ ವಿ ಸದಾನಂದಗೌಡ ಅವರು ಮಾತನಾಡಿ, ಕರಕುಶಲ ವಸ್ತುಗಳನ್ನ ತಯಾರಿಸುವ ಪರಂಪರೆ ನಮ್ಮ ದೇಶದಲ್ಲಿ ಇತ್ತು. ಅದರಿಂದಲೇ ಜೀವನ ನಿರ್ವಹಣೆ ಮಾಡ್ತಾ ಇದ್ರು. 4600 ಕ್ಕು ಹೆಚ್ಚು ಸಣ್ಣ ಸಣ್ಣ ಸಮುದಾಯದವರು ಈ ಕಾರ್ಯ ಮಾಡ್ತಾ ಇದ್ರು. ಸೂಕ್ತ ಬೆಂಬಲ, ಸೌಲಭ್ಯ ಇಲ್ಲದ ಕಾರಣ ಕ್ರಮೇಣ ಅದು ಮರೆಯಾಯ್ತು. ಈಗ ಪ್ರಧಾನಿ ಮೋದಿಯವರು ಲೋಕಲ್ ಟು ಗ್ಲೋಬಲ್ ಆಗಬೇಕು ಎಂಬ ಉದ್ದೇಶದೊಂದಿಗೆ ದೇಸಿಯ ಉತ್ಪನ್ನಗಳ ತಯಾರಿಕೆಗೆ ಬೆಂಬಲ ನೀಡುತ್ತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ದೇಸಿಯ ಉತ್ಪನ್ನಗಳ ತಯಾರಿಕೆ ಆಗಬೇಕು. ವೇದಿಕೆಯಲ್ಲಿ ನನಗೆ ಗೌರವಿಸಿ ಹೊದೆಸಿದ ಶಾಲು ಹಿಮಾಚಲಪ್ರದೇಶದಲ್ಲಿ ಸಿದ್ದಪಡಿಸಿದ್ದು. ಅದ್ಭುತವಾಗಿದೆ. ಅದೇ ರೀತಿ ಮೈಸೂರು ಸಿಲ್ಕ್ ಕೂಡ ನಮ್ಮಲ್ಲಿ ಬಹಳ ಪ್ರಸಿದ್ಧಿಯಾಗಿದೆ. ಇದಕ್ಕೆ ಇನ್ನಷ್ಟು ಬಲಕೊಟ್ಟರೆ ಉದ್ಯೋಗ ಸೃಷ್ಟಿಯಾಗತ್ತೆ. ಪ್ರತಿ ಧರ್ಮ, ಜಾತಿಯಲ್ಲೂ ವೈಶಿಷ್ಟ್ಯ ಇದೆ. ಅವರ ಪರಂಪರಾಗತವಾಗಿ ಬಂದಿರುವ ಕರಕುಶಲ ಕಲೆಯೇ ಆಯಾ ಜಾತಿ ಧರ್ಮಕ್ಕೆ ವೈಶಿಷ್ಟ್ಯತೆ ತಂದಿದೆ. ಎಲ್ಲರನ್ನೂ ಒಟ್ಟುಗೂಡಿಸುವುದು, ಎಲ್ಲರಲ್ಲು ಇರುವ ವೈಶಿಷ್ಟ್ಯತೆಯನ್ನು ಒಗ್ಗೂಡಿಸುವ ಕಾರ್ಯವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ನಮ್ಮದ ರಾಜ್ಯದ ಗೊಂಬೆ, ಸಿಲ್ಕ್ ಸೇರಿದಂತೆ ಬಹಳಷ್ಟು ಉತ್ಪನ್ನ ವಿಶ್ವಪ್ರಸಿದ್ದವಾಗಿವೆ. ಹಿಂದಿನ ಕೆಲ ಸರ್ಕಾರ ಸ್ಥಳೀಯ ಉತ್ಪನ್ನಗಳ ತಯಾರಿಕೆಗೆ ಮಹತ್ವ ನೀಡಿಲ್ಲ. ಹಾಗಾಗಿ ಹೆಚ್ಚಿನ ಏಳಿಗೆ ಸಾಧ್ಯವಾಗಿಲ್ಲ. ಈಗ ನಮ್ಮ ಸರ್ಕಾರ ಸ್ಥಳೀಯ ಉತ್ಪನ್ನಗಳ ತಯಾರಿಕೆಗೆ ಸಂಪೂರ್ಣ ಸಹಕಾರ, ಬೆಂಬಲ ನೀಡುತ್ತಿದೆ. ಹುನಾರ್ ಹಾತ್ ನಂತಹ ಕಾರ್ಯಕ್ರಮವೆ ಇದಕ್ಕೆ ಉದಾಹರಣೆ. ಇದರಿಂದ ಎಲ್ಲರ ಏಳಿಗೆ ಸಾಧ್ಯ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಪ್ರಧಾನಿ ಮೋದಿಯವರು ಯಾವುದೇ ಕಾರ್ಯಕ್ರಮ ಮಾಡಿದ್ರೂ ಅದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಜನರ ಅಭ್ಯುದಯವೇ ಮುಖ್ಯ ಗುರಿ. ಪ್ರಧಾನಿ ಮೋದಿ ಅವರು ಯೋಗವನ್ನ ವಿಶ್ವಕ್ಕೇ ಪರಿಚಯಿಸಿದ್ರು. ಅದೇ ರೀತಿ ಈಗ ಸ್ಥಳೀಯರೆ ಉತ್ಪಾದಿಸಿದ ಆಟಿಕೆ, ಫರ್ನಿಚರ್ ಹೀಗೆ ಎಲ್ಲದಕ್ಕೂ ಈಗ ಮಹತ್ವ ನೀಡಿ, ವಿಶ್ವಮಟ್ಟದಲ್ಲಿ ಹೆಸರು ಮಾಡಲು ಎಲ್ಲಾ ರೀತಿಯ ಬೆಂಬಲ ನೀಡುತ್ತಿದ್ದಾರೆ. ಹುನಾರ್ ಹಾತ್ ಕಾರ್ಯಕ್ರಮ ಕೂಡ ಇದರ ಒಂದು ಭಾಗ ಎಂದು ಹೇಳಿದರು.
ಕಾರ್ಯಕ್ರಮದ ಬಳಿಕ ವೇದಿಕೆ ಪಕ್ಕದಲ್ಲಿ ಹಾಕಿರುವ ಮಳಿಗೆಗಳಿಗೆ ಸಚಿವರು, ಸಂಸದರು ತೆರಳಿ ದೇಸಿಯ ಉತ್ಪನ್ನಗಳನ್ನು ವಿಕ್ಷೀಸಿದರು. ಬಗೆ ಬಗೆಯ ರುಚಿಕರ ಆಹಾರವನ್ನ ಸವಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು, ಮೈಸೂರು ಮಹಾರಾಜ ವಿವಿಯ ಉಪಕುಲಪತಿ ಹೇಮಂತ್ ಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Key words: local- products -increased – global –mysore-Minister -Narayana Gowda