ಮಂಡ್ಯ, ಏಪ್ರಿಲ್ 29, 2020 (www.justkannada.in): ಕೋವಿಡ್-19 ಹೋರಾಟದಲ್ಲಿ ಲಾಕ್ ಡೌನ್ ಶಾಶ್ವತ ಪರಿಹಾರ ಅಲ್ಲ, ಸಾರ್ವಜನಿಕರು ಬದುಕಿನ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಿರುವುದು ಅನಿವಾರ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಕೋವಿಡ್-19 ಕುರಿತಂತೆ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಬುಧವಾರ ಅವರು ಮಾತನಾಡಿದರು.
ಇಡೀ ಜಾಗತ್ತೆ ಇಂದು ಭಿನ್ನ ಹಾದಿಯಲ್ಲಿ ಹೆಜ್ಜೆ ಇರಿಸ ಬೇಕಾದ ಸಂದರ್ಭ ಎದುರಾಗಿದೆ. ಕೋವಿಡ್ ನಂತರ ಮತ್ತು ಕೋವಿಡ್ ಹಿಂದಿನ ದಿನಗಳು ಎಂಬ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಕೊರೋನಾ ರೋಗಾಣು ಜತೆ ಬದುಕಲೇಬೇಕಾಗಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಜತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕು ಎಂದರು.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿದಿಗಳ ಜವಾಬ್ದಾರಿ ಹೆಚ್ಚಿದೆ. ಮುಂದಿನ ದಿನಗಳ್ಲಲಿ ಎಲ್ಲರೂ ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಕ್ರಿಯಾಶೀಲರಾಗಬೇಕಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಸ್ವಚ್ಛತೆ ಜತೆಗೆ ಸರ್ಕಾರ ನೀಡುವ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.
ಮುಂಬರುವ ದಿನಗಳಲ್ಲಿ ಎದರಾಗುವ ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗ್ರಾಮದಿಂದ ರಾಜ್ಯ ಮಟ್ಟದವರೆಗೆ ನಿಗಾ ವಹಿಸಲು ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರ ವಿಷಯದಲ್ಲಿ ಎಚ್ಚರ ವಹಿಸಿ ಅವರನ್ನು ಮನೆಯಿಂದ ಹೊರಬರದಂತೆ ಇನ್ನು ಕೆಲ ದಿನಗಳ ಕಾಲ ಜಾಗೃತೆಯಿಂದ ನೋಡಿಕೊಳ್ಳಬೇಕಿದೆ ಎಂದರು.
ಆರಂಭದಲ್ಲಿ ಮಂಡ್ಯ ಹಸಿರು ವಲಯದಲ್ಲಿತ್ತು ಈಗ ಕಿತ್ತಳೆ ವಲಯಕ್ಕೆ ಬಂದಿದೆ ಮತ್ತೆ ಅದನ್ನು ಮರಳಿ ಹಸಿರು ವಲಯಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕರೆ ನೀಡಿದರು.
ಮಂಡ್ಯ ಮೆಡಿಕಲ್ ಕಾಲೇಜಿನ ಬಗ್ಗೆ ಸಾಕಷ್ಟು ದೂರು ಬಂದಿವೆ ಮುಂದಿನ ದಿನಗಳಲ್ಲಿ ಆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಕಾಲೇಜನ್ನು ಮಂಡ್ಯದ ಹೆಮ್ಮೆಯ ಸಂಸ್ಥೆಯಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು .
ಇನ್ನೊಂದು ವಾರದೊಳಗೆ ಮೆಡಿಕಲ್ ಕಾಲೇಜಿನಲ್ಲಿ ಪ್ರಯೋಗಾಲಯ ಆರಂಭಿಸಲಾಗುವುದು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಅನುಕೂಲ ಆಗುತ್ತದೆ . ಮಾಧ್ಯಮ ಕ್ಷೇತ್ರದಲ್ಲಿರುವವರನ್ನು ವಿಮೆ ವ್ಯಾಪ್ತಿಗೆ ಸೇರಿಸುವ ನಿಟ್ಟಿನಲ್ಲಿ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆಸಿ ನಾರಾಯಣ ಗೌಡ, ಸಂಸದೆ ಸುಮಲತಾ ಅಂಬರೀಶ್, ಸಿಎಸ್ ಪುಟ್ಟರಾಜು, ಶಾಸಕರಾದ ಕೆಟಿ ಶ್ರೀಕಂಠೇಗೌಡ, ಎಂ ಶ್ರೀನಿವಾಸ್, ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ , ಡಾಕ್ಟರ್ ಅನ್ನದಾನಿ ಅಪ್ಪಾಜಿ ಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸ್ವಾಮಿ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.