ಮೈಸೂರು, ಆಗಸ್ಟ್ 14, 2022 (www.justkannada.in): ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮೈಸೂರು ಜಿಲ್ಲೆಯನ್ನೊಳಗೊಂಡಂತೆ ರಾಜ್ಯಾದ್ಯಂತ ಕಕ್ಷಿಗಾರರಿಗೆ ಮತ್ತು ಜನ ಸಾಮಾನ್ಯರಿಗೆ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಿಕೊಳ್ಳಲು ಅನುಕೂಲ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಲೋಕ್ ಅದಾಲತ್ನ್ನು ಹಮ್ಮಿಕೊಳ್ಳಲಾಗಿತ್ತು.
ಮೈಸೂರು ನಗರ ಮತ್ತು ತಾಲ್ಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ಒಟ್ಟು 1,15,893 ಪ್ರಕರಣಗಳು ಬಾಕಿಯಿದ್ದು, ಅವುಗಳ ಪೈಕಿ 50,811 ಪ್ರಕರಣಗಳು ರಾಜಿಯಾಗಬಲ್ಲ ಪ್ರಕರಣಗಳೆಂದು ಗುರುತಿಸಲಾಗಿದ್ದು, ಅವುಗಳಲ್ಲಿ ಇಲ್ಲಿಯವರೆಗೆ 33,551 ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ಕ್ರಮಕೈಗೊಳ್ಳಲಾಗಿರುತ್ತದೆ.
ಮೇಲ್ಕಂಡಂತೆ ನ್ಯಾಯಾಲಯದಲ್ಲಿ ಬಾಕಿರುವ ಪ್ರಕರಣಗಳಲ್ಲಿ ರಾಜಿ ಸಂಧಾನಕ್ಕಾಗಿ ಗುರುತಿಸಲಾದ 33,551 ಪ್ರಕರಣಗಳ ಪೈಕಿ 18,705 ಪ್ರಕರಣಗಳನ್ನು ಹಾಗೂ 38,843 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಅಂದರೆ ಒಟ್ಟಾರೆಯಾಗಿ 57,548 ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಇತ್ಯರ್ಥಪಡಿಸಲಾಗಿರುತ್ತದೆ.
ಈ ಬಾರಿ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಕೌಟುಂಬಿಕ ಕಲಹದ ಪ್ರಕರಣಗಳಲ್ಲಿ ಮೈಸೂರು ನಗರ ಹಾಗೂ ಮೈಸೂರು ತಾಲ್ಲೂಕು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು 27 ದಂಪತಿಗಳು ತಮ್ಮ ಮಧ್ಯದ ಕಲಹವನ್ನು ಮರೆತು ಲೋಕ್ ಅದಾಲತ್ ತೀರ್ಮಾನದಂತೆ ಜೊತೆಯಾಗಿ ಬಾಳ್ವೆ ಮಾಡುವುದಾಗಿ ತಿಳಿಸಿದ್ದಾರೆ.
ಅಲ್ಲದೆ ಈ ಬಾರಿಯ ಲೋಕ್ ಅದಾಲತ್ನಲ್ಲಿ ವಿಶೇಷವಾಗಿ Traffic (Challan) Violation ಸಂಬಂಧಿಸಿದ ಪ್ರಕರಣಗಳಲ್ಲಿ 31,964 ಪ್ರಕರಣಗಳು ವಿಲೇವಾರಿಯಾಗಿದ್ದು, ಸದರಿ ರೂ.1,76,18,200/- ಗಳು ಸ್ವೀಕೃತವಾಗಿರುತ್ತದೆ. ಮೆಗಾ ಲೋಕ್ ಅದಾಲತ್ನಲ್ಲಿ ತೀರ್ಮಾನವಾದ ಪ್ರಕರಣಗಳಲ್ಲಿ ಇಲ್ಲಿಯವರೆಗೆ ಒಟ್ಟು ರೂ.42,37,99,068/- ಗಳನ್ನು ಪರಿಹಾರ ನೀಡಲು ಆದೇಶಿಸಲಾಗಿದೆ.
ಎಂ.ಎಲ್.ರಘುನಾಥ್, ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು, ದೇವರಾಜ್ ಭೂತೆ, ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು, ಮೈಸೂರು ವಕೀಲರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ವಕೀಲರು ಹಾಜರಿದ್ದರು.