ಬೆಂಗಳೂರು:ಮೇ-19: ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಇಂದು ಕೊನೆಯ 7ನೇ ಸುತ್ತಿನ ಮತದಾನ ಆರಂಭವಾಗಿದ್ದು, ಎಲ್ಲ ರಾಜಕೀಯ ಪಕ್ಷಗಳು ಮತದಾನೋತ್ತರ ಸಮೀಕ್ಷೆಗಳತ್ತ ದೃಷ್ಟಿ ನೆಟ್ಟು ರಾಜಕೀಯ ಲೆಕ್ಕಾಚಾರಕ್ಕೆ ಅಣಿಯಾಗುತ್ತಿವೆ.
ರಾಜ್ಯದಲ್ಲೂ ಲೋಕಸಭಾ ಚುನಾವಣೆ ಜತೆಗೆ ವಿಧಾನಸಭೆಯಲ್ಲಿ ಸಂಖ್ಯಾಬಲ ದೃಷ್ಟಿಯಿಂದ ಮಹತ್ವದ್ದೆನಿಸಿರುವ ಕುಂದಗೋಳ, ಚಿಂಚೋಳಿ ವಿಧಾನಸಭೆ ಉಪಚುನಾವಣೆ ಮತದಾನೋತ್ತರ ಸಮೀಕ್ಷೆ ಬಗ್ಗೆಯೂ ರಾಜ್ಯ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರು ಕಾತರರಾಗಿದ್ದಾರೆ. ಕೇಂದ್ರ ಸಚಿವರು, ಲೋಕಸಭೆಯಲ್ಲಿ ಸಂಸದೀಯ ನಾಯಕರು, ಮಾಜಿ ಕೇಂದ್ರ ಸಚಿವರು, ಹಾಲಿ ಸಂಸದರು, ಹೊಸ ಅಭ್ಯರ್ಥಿಗಳು ಸಹ ಸಮೀಕ್ಷಾ ವರದಿಯನ್ನು ಎದುರು ನೋಡುತ್ತಿದ್ದು, ಮೂರೂ ಪಕ್ಷಗಳಲ್ಲೂ ಮತದಾನೋತ್ತರ ಸಮೀಕ್ಷಾ ವಿವರ ಮುಂದಿನ 3 ದಿನ ರಾಜಕೀಯ ಚರ್ಚೆಗೆ ಸರಕು ಒದಗಿಸುವ ನಿರೀಕ್ಷೆ ಮೂಡಿದೆ.
ರಾಜ್ಯದಲ್ಲಿ ಏ. 18 ಹಾಗೂ 24ರಂದು ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಪೂರ್ಣಗೊಂಡಿತ್ತು. ಆದರೆ ದೇಶಾದ್ಯಂತ ಏಳು ಹಂತಗಳಲ್ಲಿ ಮತದಾನವಿದ್ದ ಕಾರಣ ಮತದಾನೋತ್ತರ ಚುನಾವಣಾ ಸಮೀಕ್ಷೆಗಳು ಬಹಿರಂಗವಾಗಲಿಲ್ಲ.
ಹಾಗಿದ್ದರೂ ಮತದಾನ ಪ್ರಮಾಣ, ವಿಧಾನಸಭಾ ಕ್ಷೇತ್ರವಾರು ಮತದಾನದ ಅಂಕಿಸಂಖ್ಯೆ, ಹಿಂದಿನ ಲೋಕಸಭಾ ಚುನಾವಣಾ ಫಲಿತಾಂಶ ಇತರೆ ಅಂಶಗಳು ಹಾಗೂ ಬೂತ್‌ಮಟ್ಟದ ಕಾರ್ಯಕರ್ತರ ಮಾಹಿತಿ ಆಧರಿಸಿ ಎಲ್ಲ ಪಕ್ಷಗಳ ನಾಯಕರು ತಮ್ಮದೇ ಆದ ಸಮೀಕ್ಷಾ ವಿವರಗಳನ್ನು ಪಡೆದುಕೊಂಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯ 15 ಸಂಸದರಿದ್ದರೆ (ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್ ನಿಧನದಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರ ಸ್ಥಾನ ತೆರವಾಗಿತ್ತು) ಕಾಂಗ್ರೆಸ್ 10 ಹಾಗೂ ಜೆಡಿಎಸ್‌ನ ಇಬ್ಬರು ಸಂಸದರಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ವಿಧಾನಸಭೆ ಚುನಾವಣೆ ನಂತರ ಮೈತ್ರಿ ಮಾಡಿಕೊಂಡ ಕಾಂಗ್ರೆಸ್, ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಮತದಾನ ಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿವೆ. ಬಿಜೆಪಿಯು ಈ ಬಾರಿ 22 ಸ್ಥಾನ ಗೆಲ್ಲುವ ಗುರಿಯೊಂದಿಗೆ ಚುನಾವಣೆ ಮುಗಿಸಿದೆ.
ಸಮೀಕ್ಷೆಗಳತ್ತ ಚಿತ್ತ: ದೇಶಾದ್ಯಂತ ಏಳು ಸುತ್ತಿನ ಮತದಾನ ಭಾನುವಾರ ಸಂಜೆ 6 ಗಂಟೆಗೆ ಮುಕ್ತಾಯವಾಗುತ್ತಿದ್ದಂತೆ ಲೋಕಸಭಾ ಚುನಾವಣೆ ಮತದಾನೋತ್ತರ ಸಮೀಕ್ಷೆಯತ್ತ ಎಲ್ಲ ರಾಜಕೀಯ ಪಕ್ಷಗಳು ಚಿತ್ತ ಹರಿಸಲಿವೆ. ಕೇಂದ್ರದಲ್ಲಿ ಸರ್ಕಾರ ರಚಿಸುವ ಪಕ್ಷಗಳು ಹಾಗೂ ರಾಜ್ಯದಲ್ಲಿ ಮೈತ್ರಿ ಪಕ್ಷಗಳು ಹಾಗೂ ಬಿಜೆಪಿ ಗೆಲ್ಲುವ ಸ್ಥಾನ ಕುರಿತಂತೆ ಮತದಾನೋತ್ತರ ಸಮೀಕ್ಷೆಗಳನ್ನು ತಿಳಿಯಲು ರಾಜಕೀಯ ನಾಯಕರು ಕುತೂಹಲದಿಂದ ಕಾಯುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ 17 ಸ್ಥಾನ ಗೆದ್ದಿದ್ದ ಬಿಜೆಪಿಯು ಈ ಬಾರಿ ಇನ್ನೂ ಐದು ಸ್ಥಾನ ಗಳಿಸುವ ಲೆಕ್ಕಾಚಾರ ಹೊಂದಿದ್ದು, ಸಮೀಕ್ಷೆಗಳು ಏನು ಹೇಳುತ್ತವೋ ಎಂದು ಕಾತರದಿಂದ ಕಾಯುತ್ತಿದೆ. ಅದೇ ರೀತಿ ಕಾಂಗ್ರೆಸ್ – ಜೆಡಿಎಸ್ ಕೂಡ ರಾಜ್ಯದಲ್ಲಿ 18ಕ್ಕೂ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿದ್ದು, ಮತದಾನೋತ್ತರ ಸಮೀಕ್ಷೆಯತ್ತ ದೃಷ್ಟಿ ನೆಟ್ಟಿದೆ. ಈ ಮಧ್ಯೆ, ಬಿಜೆಪಿಯು ಲೋಕಸಭಾ ಚುನಾವಣೆ ಫಲಿತಾಂಶ ಮಾತ್ರವಲ್ಲದೆ ಭಾನುವಾರ ಮತದಾನ ನಡೆಯುವ ಕುಂದಗೋಳ, ಚಿಂಚೋಳಿ ವಿಧಾನಸಭೆ ಉಪಚುನಾವಣೆ ಫಲಿತಾಂಶದ ಬಗ್ಗೆಯೂ ಕಾತರದಿಂದ ಇದೆ. ವಿಧಾನಸಭೆಯಲ್ಲಿ ಶಾಸಕರ ಬಲ ವೃದ್ಧಿ ದೃಷ್ಟಿಯಿಂದ ಈ ಎರಡೂ ಸ್ಥಾನ ಗೆಲ್ಲುವುದು ಮಹತ್ವದ್ದೆನಿಸಿದೆ.
ಸಂಸದರು, ಕಾರ್ಯಕರ್ತರಲ್ಲೂ ಕಾತರ: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಣದಲ್ಲಿರುವ ಹಾಲಿ ಸಂಸದರು, ಯುವ- ಹೊಸ ಅಭ್ಯರ್ಥಿಗಳು ಸಹಜವಾಗಿಯೇ ಮತದಾನೋತ್ತರ ಸಮೀಕ್ಷೆ ಬಗ್ಗೆ ಕಾತರರಾಗಿದ್ದಾರೆ. ಜತೆಗೆ ಮೂರು ಪಕ್ಷಗಳ ಕಾರ್ಯಕರ್ತರು ಕೂಡ ಸಮೀಕ್ಷಾ ವರದಿಗಳನ್ನು ಎದುರು ನೋಡುತ್ತಿದ್ದು, ತಮ್ಮ ಪಕ್ಷಗಳ ಬಲ ಪ್ರದರ್ಶನವನ್ನು ಅಂದಾಜಿಸುವ ಉಮೇದಿನಲ್ಲಿದ್ದಾರೆ. ಒಟ್ಟಾರೆ ಮತ ಎಣಿಕೆಗೂ ಮೊದಲು ಮತದಾನೋತ್ತರ ಸಮೀಕ್ಷೆಯ ವಿವರ ತಿಳಿಯಲು ರಾಜಕೀಯ ನಾಯಕರು ಉತ್ಸುಕರಾಗಿದ್ದಾರೆ.
ಕೃಪೆ:ಉದಯವಾಣಿ