ನವದೆಹಲಿ: ಜೂ-17: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಮೀಕ್ಷೆ ಮಾಡುವ ನೆಪದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ಬರೊಬ್ಬರಿ 8 ಕೋಟಿ ಪಡೆದುಕೊಂಡಿದ್ದಾರಂತೆ.
ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಗಾರಿಕೆ ಜವಾಬ್ದಾರಿ ವಹಿಸಿದ್ದ ಪ್ರವೀಣ್ ಚಕ್ರವರ್ತಿ ಅವರಿಗೆ 24 ಕೋಟಿ ರೂ. ಸಂದಾಯವಾಗಿದ್ದು, ಈ ಹಣದಲ್ಲಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಜವಾಬ್ದಾರಿ ವಹಿಸಿಕೊಂಡಿದ್ದ ರಮ್ಯಾ ಅವರಿಗೆ 8 ಕೋಟಿ ರೂ. ನೀಡಲಾಗಿದೆ. ಈ ಬಗ್ಗೆ ಅವರು ಯಾವುದೇ ರೀತಿಯ ಲೆಕ್ಕ ಕೊಟ್ಟಿಲ್ಲ ಎಂದು ದಿ ಸಂಡೇ ಗಾರ್ಡಿಯನ್ ವರದಿ ಮಾಡಿದೆ.
ಚುನಾವಣೆಯ ಫಲಿತಾಂಶದ ಬಳಿಕ ಪ್ರವೀಣ್ ಚಕ್ರವರ್ತಿ ಹಾಗೂ ಕಾಂಗ್ರೆಸ್ ಪಕ್ಷದ ಶಕ್ತಿ ಆ್ಯಪ್ ಸೇರಿದಂತೆ ವಿವಿಧ ಉಸ್ತುವಾರಿಗಳಿಂದ ದೂರವಾಗಿದ್ದಾರೆ.ಅಲ್ಲದೇ ನಟಿ ರಮ್ಯಾ ಕೂಡ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಹಣದ ಬಗ್ಗೆ ಸರಿಯಾದ ಲೆಕ್ಕ ನೀಡದ ಕಾರಣದಿಂದಲೇ ಎಐಸಿಸಿ ಇವರನ್ನೆಲ್ಲ ಸಾಮಾಜಿಕ ಜಾಲತಾಣದಿಂದ ದೂರ ಇಟ್ಟಿದೆ ಎನ್ನಲಾಗಿದೆ.
ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದ ರಾಹುಲ್ ಆಪ್ತರು, ಅಖಿಲೇಶ್ ಯಾದವ್, ಎಂಕೆ ಸ್ಟ್ಯಾಲಿನ್, ಓಮರ್ ಅಬ್ದುಲ್ಲ ಸೇರಿದಂತೆ ಹಲವು ನಾಯಕರೊಂದಿಗೆ ಯುಪಿಎ ಮೈತ್ರಿ ರಚಿಸಲು ಸಿದ್ಧತೆ ನಡೆಸಿದ್ದರು. ಕಾಂಗ್ರೆಸ್ ಪಕ್ಷದ ಸಮೀಕ್ಷೆಗಳು ನೀಡುವ ಮಾಹಿತಿಯಂತೆ ಕಾಂಗ್ರೆಸ್ 164ಕ್ಕೂ ಹೆಚ್ಚು ಸ್ಥಾನ ಪಡೆದು ಮೈತ್ರಿ ಮೂಲಕ ಅಧಿಕಾರ ರಚಿಸಲು ಸಿದ್ಧತೆ ನಡೆಸಿತ್ತು ಎಂದು ಹೇಳಲಾಗಿದೆ.