ಬೆಂಗಳೂರು,ಏಪ್ರಿಲ್,24,2024 (www.justkannada.in): ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಇಂದು ಬಹಿರಂಗ ಪ್ರಚಾರಕ್ಕೆ ಕೊನೇ ದಿನವಾಗಿದೆ.
ಏಪ್ರಿಲ್ 26 ರಂದು ರಾಜ್ಯದಲ್ಲಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 14 ಕ್ಷೇತ್ರಗಳಲ್ಲಿ ಒಟ್ಟು 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 226 ಪುರುಷರು, 21 ಮಹಿಳಾ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ಉಭಯ ಪಕ್ಷದ ನಾಯಕರು ಆರೋಪ, ಪ್ರತ್ಯಾರೋಪ, ಏಟು ಎದಿರೇಟುಗಳ ಮೂಲಕ ಅಬ್ಬರ ಪ್ರಚಾರ ನಡೆಸಿದ್ದು ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
ಮೈಸೂರು-ಕೊಡುಗು, ಮಂಡ್ಯ, ಚಾಮರಾಜನಗರ, ಹಾಸನ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ತುಮಕೂರು, ಕೋಲಾರ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಿತ್ರದುರ್ಗ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ.
ಪ್ರಮುಖ ಪಕ್ಷದ ನಾಯಕರ ಅಬ್ಬರದ ಪ್ರಚಾರ, ವಾಗ್ಯುದ್ಧ, ಆರೋಪ, ಪ್ರತ್ಯಾರೋಪದೊಂದಿಗೆ ಚುನಾವಣಾ ಕಣ ಕಾವೇರಿತ್ತು. ಈ ನಡುವೆ ಇಂದು ಅಬ್ಬರದ ಪ್ರಚಾರಕ್ಕೆ ಕೊನೆ ಬೀಳಲಿದೆ. ಉಳಿದ ಒಂದು ದಿನ ಮನೆ ಮನೆಗಳಿಗೆ ತೆರಳಿ ಮತದಾರರ ಓಲೈಸುವ ಯತ್ನ ನಡೆಯಲಿದೆ. ಅಭ್ಯರ್ಥಿಗಳು ನಾನಾ ರೀತಿಯ ತಂತ್ರ ಕಾರ್ಯತಂತ್ರಗಳ ಮೂಲಕ ಮತದಾರರ ಸೆಳೆಯುವ ಕಸರತ್ತು ನಡೆಸಿದರು.
ಇನ್ನು ರಾಜ್ಯದಲ್ಲಿ ಮೊದಲ ಹಂತದಲ್ಲಿ ಮತ ಚಲಾಯಿಸಲಿರುವ ಒಟ್ಟು ಮತದಾರರು- 2,88,08,182, ಈ ಪೈಕಿ ಪುರುಷರು 1,44,17,530, ಮಹಿಳೆಯರು 1,43,87,585, ಇತರೆ 3,067 ಮಂದಿ ಇದ್ದಾರೆ.
Key words: Lok Sabha, Elections, 14 constituencies