ನವದೆಹಲಿ: ಮೇ-5: ಉತ್ತರ ಪ್ರದೇಶ ಪ್ರಮುಖ ಕ್ಷೇತ್ರಗಳು ಸೇರಿದಂತೆ 7 ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಇಂದು 5ನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಉತ್ತರಪ್ರದೇಶ(14), ರಾಜಸ್ಥಾನ(12), ಪಶ್ಚಿಮ ಬಂಗಾಳ(7), ಮಧ್ಯಪ್ರದೇಶ(7), ಬಿಹಾರ(5), ಜಾರ್ಖಂಡ್(4) ಹಾಗೂ ಜಮ್ಮು-ಕಾಶ್ಮೀರದಲ್ಲಿ ಲಡಾಖ್, ಅನಂತ್ನಾಗ್ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
ಬೆಳಗ್ಗೆ 7ರಿಂದ ಆರಂಭವಾಗಿರುವ ಮತದಾನ ಸಂಜೆ 6ಕ್ಕೆ ಕೊನೆಗೊಳ್ಳಲಿದೆ. ಒಟ್ಟಾರೆ 8.75 ಕೋಟಿ ಮತದಾರರು 674 ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನು ಮತದಾರರು ಇಂದು ಬರೆಯಲಿದ್ದಾರೆ.
ಕೇಂದ್ರ ಸಚಿವ ರಾಜನಾಥ್ ಸಿಂಗ್ ಸ್ಪರ್ಧಿಸಿರುವ ಲಖನೌ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸಿರುವ ಅಮೇಠಿ, ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಸ್ಪರ್ಧಿಸಿರುವ ರಾಯ್ಬರೇಲಿ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಈ ಬಾರಿ ಹಂತದಿಂದ ಹಂತಕ್ಕೆ ಮತದಾನ ಇಳಿಕೆಯಾಗಿರುವುದರಿಂದ ಐದನೇ ಹಂತದ ಮತ ಪ್ರಮಾಣ ಹೇಗಾಗಬಹುದು ಎಂಬ ಕುತೂಹಲವಿದೆ. ಮೇ 11 ಹಾಗೂ 19ರಂದು ಕೊನೆಯ ಎರಡು ಹಂತದ ಮತದಾನ ನಡೆಯಲಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಲಖನೌನ ಸ್ಕಾಲರ್ಸ್ ಹೋಂ ಸ್ಕೂಲ್ನ ಮತಗಟ್ಟೆ ಸಂಖ್ಯೆ 333ರಲ್ಲಿ ಮತಚಲಾಯಿಸುವ ಮೂಲಕ ಸಂಭ್ರಮ ಆಚರಿಸಿದರು. ತಮ್ಮ ಹಕ್ಕು ಚಲಾಯಿಸಿದ ಬಳಿಕ ಎಡಗೈ ತೋರುಬೆರಳಿಗೆ ಹಚ್ಚಿಸಿಕೊಂಡಿದ್ದ ಮಸಿ ಗುರುತನ್ನು ಪ್ರದರ್ಶಿಸಿದರು.
ರಾಜಸ್ಥಾನದ ಜೈಪುರದ ಮತಗಟ್ಟೆಯಲ್ಲಿ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತವರ ಪತ್ನಿ ಗಾಯತ್ರಿ ರಾಥೋಡ್ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು.
ಹಜಾರಿಬಾಗ್ ಲೋಕಸಭಾ ಕ್ಷೇತ್ರದಲ್ಲಿನ ಮತಗಟ್ಟೆಯೊಂದರಲ್ಲಿ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಮತ್ತವರ ಪತ್ನಿ ನೀಲಿಮಾ ಸಿನ್ಹಾ ಅವರ ಮತದಾನ ಮಾಡಿದರು.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪೈಪೋಟಿ ನಡೆಸುತ್ತಿರುವ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿನ ಮತಗಟ್ಟೆಗೆ ಅರೆಮಿಲಿಟರಿ ಪಡೆ ಯೋಧರ ನೇಮಕ ಮಾಡಲಾಗಿದ್ದು, ಬಿಗಿ ಭದ್ರತೆ ನಡುವೆ ಮತದಾನ ನಡೆಯಿತ್ತಿದೆ.
ಕೃಪೆ:ವಿಜಯವಾಣಿ