ಲೋಕಸಭೆ ಚುನಾವಣೆ: ರಾಜ್ಯದಲ್ಲಿ ಮತದಾರರ ಸಂಖ್ಯೆ, ಮತಗಟ್ಟೆಗಳ ಬಗ್ಗೆ ಮಾಹಿತಿ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ.

ಬೆಂಗಳೂರು,ಮಾರ್ಚ್,16,2024(www.justkannada.in):  ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ದೇಶಾದ್ಯಂತ 7 ಹಂತಗಳಲ್ಲಿ ಕರ್ನಾಟಕದಲ್ಲಿ 2 ಹಂತಗಳಲ್ಲಿ ಮತದಾನ ನಡೆಯಲಿದ್ದು ಈ ನಡುವೆ ರಾಜ್ಯದಲ್ಲಿನ ಮತದಾರರ ಸಂಖ್ಯೆ, ಮತಗಟ್ಟೆಗಳು ಸೇರಿ ಹಲವು ಅಂಶಗಳ  ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲಿಯೇ ಕರ್ನಾಟಕ ಲೋಕಸಭಾ ಕ್ಷೇತ್ರಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ5,42,08,088 ಮತದಾರರಿದ್ದಾರೆ. ಈ ಪೈಕಿ  2,71,21,407 ಪುರುಷ ಮತದಾರರು ಹಾಗೂ  2,70,81,748 ಮಹಿಳೆ ಮತದಾರರು ಇದ್ದಾರೆ. 4,933  ತೃತೀಯ ಲಿಂಗಿಗಳು ಇದ್ದಾರೆ. ಒಟ್ಟು 58,834 ಮತಗಟ್ಟೆಗಳಲ್ಲಿ ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತಗಳಲ್ಲಿ ಮತದಾನ  ನಡೆಯಲಿದೆ. ಇನ್ನು ಚುನಾವಣೆ ಫಲಿತಾಂಶ  ಜೂನ್ 4ರಂದು ಘೋಷಣೆಯಾಗಲಿದೆ ಎಂದು ತಿಳಿಸಿದರು.

85 ವರ್ಷ ಮೇಲ್ಪಟ್ಟ 5,70,168 ಮತದಾರರು ಮನೆಯಲ್ಲಿಯೇ ಮತದಾನ ಮಾಡಲಿದ್ದಾರೆ. ಜೊತೆಗೆ 3,51,153 ಸಿಬ್ಬಂದಿ ಪೋಸ್ಟಲ್ ವೋಟಿಂಗ್ ಮಾಡಲಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 31,74,098 ಮತದಾರರಿದ್ದು, ಅತಿಹೆಚ್ಚು ಮತದಾರರಿರುವ ಕ್ಷೇತ್ರವಾಗಿದೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕೇವಲ 15,72,958 ಮತದಾರರಿದ್ದು, ಅತಿ ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ ಎಂದು  ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದರು.

Key words: Lok Sabha Elections- State Chief Electoral Officer – information – voters